ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭವ್ಯ ಬಯಲುರಂಗಮಂದಿರ ಈಗ ಹಾವು, ಚೇಳುಗಳ ತಾಣ!

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಒಂದು ಯೋಜನೆ ಕಾರ್ಯಗತಗೊಳ್ಳುವ ತನಕ ನಮ್ಮ ಜನಪ್ರತಿನಿಧಿಗಳಿಗೆ ವಿಪರೀತ ಆಸಕ್ತಿ. ಸರಕಾರದಿಂದ ಕೋಟ್ಯಂತರ ಹಣ ತಂದು ಕಟ್ಟಡ ಕಟ್ಟಿ ಕೈತೊಳೆದುಕೊಂಡರೆ ಅವರ ಕೆಲಸ ಮುಗಿಯಿತು. ಅದರ ನಿರ್ವಹಣೆ ಮತ್ತು ಸದ್ಬಳಕೆ ಅವರಿಗೆ ಬೇಕಿಲ್ಲ. ಇದಕ್ಕೊಂದು ತಾಜಾ ಉದಾಹರಣೆ, ಉಡುಪಿಯ ಮಹಾತ್ಮಾಗಾಂಧಿ ಬಯಲು ರಂಗ ಮಂದಿರ.

ದೂರದಲ್ಲಿ ನೋಡಿದರೆ ಇದೊಂದು ಭೂತ ಬಂಗಲೆಯಂತೆ ಭಾಸವಾಗುತ್ತಿದೆ. ಹಿಂದೆಲ್ಲ ಇಲ್ಲಿ ಪ್ರತಿ ವರ್ಷ ಜಿಲ್ಲಾಡಳಿತ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಜತೆಗೆ ಕ್ರಿಕೆಟ್‌, ಕಲಾ ಚಟುವಟಿಕೆಗಳು, ಉತ್ಸವ, ಮೇಳಗಳು ನಡೆಯುತ್ತಿದ್ದವು. ಆದರೆ ಈಗ ಇದು ಪಾಳು ಬಿದ್ದು ಮೂರ್ನಾಲ್ಕು ವರ್ಷಗಳಾಗಿವೆ. ಕ್ರೀಡೆ, ಉತ್ಸವ, ಸಾರ್ವಜನಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಿಯಾಯತಿ ದರದಲ್ಲಿ ಸಭಾಂಗಣ ಒದಗಿಸುವ ಉದ್ದೇಶದಿಂದ ಬಯಲು ರಂಗಮಂದಿರ ನಿರ್ಮಿಸಲಾಗಿತ್ತು. ಆದರೆ ಸರಿಯಾಗಿ ನಿರ್ವಹಣೆ ಮಾಡದೆ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ರಂಗಮಂದಿರ ಈಗ ಈ ದುಃಸ್ಥಿತಿಗೆ ತಲುಪಿದೆ.

ಎರಡು ಕಡೆಗಳಲ್ಲಿ ಮಂದಿರದ ಆವರಣ ಗೋಡೆ ಕುಸಿದುಬಿದ್ದಿದೆ. ಇನ್ನೊಂದು ಬದಿಯಲ್ಲಿ ಗೋಡೆ ಕುಸಿದು ಬೀಳುವ ಹಂತದಲ್ಲಿದೆ. ಇದುವರೆಗೆ ಅದನ್ನು ಸರಿಪಡಿಸುವ ಕೆಲಸವಾಗಿಲ್ಲ. ಮೈದಾನದ ಒಳಗೆ ಗಿಡಗಂಟಿಗಳು ಆವರಿಸಿಕೊಂಡಿವೆ. ವೇದಿಕೆಯೂ ನಿರ್ವಹಣೆಯಿಲ್ಲದ ಶಿಥಿಲಾವಸ್ಥೆಗೆ ತಲುಪಿದೆ. ಮದ್ಯದ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯ ರಾಶಿ ಪರಿಸರದ ಅಂದವನ್ನು ಕೆಡಿಸಿದೆ. ರಾತ್ರಿ ಅಕ್ರಮ ಚಟುವಟಿಕೆಗಳ ಜತೆಗೆ ಮದ್ಯ ಪಾರ್ಟಿ, ಜೂಜಾಟದ ಕೇಂದ್ರವಾಗಿ ಮಾರ್ಪಟ್ಟಿದೆ.ಹಾವು ಚೇಳುಗಳು ಸೇರಿಕೊಂಡಿವೆ.

ಬಯಲು ರಂಗಮಂದಿರ ಜಿಲ್ಲಾಡಳಿತಕ್ಕೆ ಒಳಪಟ್ಟಿದ್ದು, ನಿರ್ವಹಣೆ ನಗರಸಭೆಗೆ ವಹಿಸಲಾಗಿದೆ. ತಕ್ಷಣ ಸಂಬಂಧಪಟ್ಟವರು ಈ ಸುಂದರ ಬಯಲು ರಂಗಮಂದಿರವನ್ನು ಮತ್ತೆ ಬಳಕೆಗೆ ಬರುವಂತೆ ಮಾಡಬೇಕು. ಸೂಕ್ತ ನಿರ್ವಹಣೆ ಮಾಡಿ ಜನರ ತೆರಿಗೆ ದುಡ್ಡಿನ ಸದ್ಬಳಕೆ ಆಗಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

Edited By : Shivu K
Kshetra Samachara

Kshetra Samachara

16/05/2022 10:08 pm

Cinque Terre

5.23 K

Cinque Terre

0

ಸಂಬಂಧಿತ ಸುದ್ದಿ