ಮಂಗಳೂರು: ಮರುಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಹೊಸ ದಾರಿ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳೂರಿನ ಘನ ತ್ಯಾಜ್ಯ ನಿರ್ವಹಣಾ ಸ್ಟಾರ್ಟ್ಅಪ್ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಅಮೇರಿಕಾದ ರಿಪಪರ್ಸ್ ಗ್ಲೋಬ್ ಸಂಸ್ಥೆಯೊಂದಿಗೆ ನೂತನ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿಲ್ ರಾಜ್ ಆಳ್ವ ಹಾಗೂ ರಿಪಪರ್ಸ್ ಗ್ಲೋಬ್ ಸಂಸ್ಥೆಯ ಕಮಲ್ ರಾಜ್ ಈ ಒಡಂಬಡಿಕೆಗೆ ಸಹಿ ಹಾಕಿ ಒಪ್ಪಂದ ಮಾಡಿಕೊಂಡರಿದ್ದಾರೆ.
ಈ ಬಗ್ಗೆ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಂಜನ್ ಬೆಳ್ಳರ್ಪಾಡಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿ, ಈ ಒಪ್ಪಂದಂತೆ ತಿಂಗಳೊಂದಕ್ಕೆ ಕನಿಷ್ಠ 50 ಟನ್ ಎಂಎಲ್ ಪಿ ಮರುಬಳಕೆಯಾಗದ ಪ್ಲಾಸ್ಟಿಕ್ ಅನ್ನು ಕಳುಹಿಸಿಕೊಡುತ್ತಿದ್ದೇವೆ. ಅದರ ಸರ್ಟಿಫಿಕೇಟ್ ಅನ್ನು ನಾವು ಕೊಡುತ್ತಿದ್ದೇವೆ. ಅದನ್ನು ಅಮೇರಿಕಾದ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳಿಗೆ ನೀಡುವ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇವೆ. ಈವರೆಗೆ ಹೊರೆಯಾಗಿದ್ದ ತ್ಯಾಜ್ಯದ ಸಮಸ್ಯೆಗಳಿಗೆ ಮುಕ್ತಿ ದೊರಕಿದಂತಾಗುತ್ತದೆ. ಒಪ್ಪಂದದ ಹಿನ್ನೆಲೆಯಲ್ಲಿ ಸಂಸ್ಥೆಯು ಪ್ರತೀ ಕೆಜಿಗೆ ಇಂತಿಷ್ಟು ಹಣವನ್ನು ತ್ಯಾಜ್ಯ ವಿಲೇವಾರಿಗೆಂದು ನೀಡುತ್ತಾರೆ.
ನಾವು ಮರುಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಿಮೆಂಟ್ ಫ್ಯಾಕ್ಟರಿಗೆ ಕಳುಹಿಸಿಕೊಡುತ್ತೇವೆ. ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಈ ಪ್ಲಾಸ್ಟಿಕ್ ಗಳು ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಕೆಯಾಗುತ್ತಿದೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ಲೈನ್ ಟ್ಟೋನ್ ಅನ್ನು 900-1000 ಡಿಗ್ರಿಯಲ್ಲಿ ಉರಿಸುವ ಮೂಲಕ ಈ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ಮಾರಕವಾಗದೆ ಬದಲಿ ಇಂಧನವಾಗಿ ಬಳಕೆಯಾಗುತ್ತದೆ. ಈ ಮೂಲಕ ಸಮಸ್ಯೆಯಾಗಿ ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪೂರಕವಾದ ವಾತಾವರಣ ದೊರಕಿ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ.
ಈಗಾಗಲೇ 15 ಟನ್ ಮರುಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರಯೋಗಾರ್ಥವಾಗಿ ಸಿಮೆಂಟ್ ಫ್ಯಾಕ್ಟರಿಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಮೇ ತಿಂಗಳಿನಿಂದ ಪ್ರತೀ ತಿಂಗಳು 50 ಟನ್ ತ್ಯಾಜ್ಯವನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ ಬದಲಿ ಇಂಧನವಾಗಿ ಕಳುಹಿಸಿಕೊಡಲಾಗುತ್ತದೆ. ಈ ಮೂಲಕ ಗ್ರಾಮೀಣ ಹಾಗೂ ನಗರ ಮಟ್ಟದ ಪ್ಲಾಸ್ಟಿಕ್ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ದೊರಕಿಸಿಕೊಡುವ ವಿನೂತನ ಪ್ರಯೋಗವನ್ನು ಮಾಡಲಾಗುತ್ತಿದೆ ಎಂದು ರಂಜನ್ ಬೆಳ್ಳರ್ಪಾಡಿ ಹೇಳಿದರು.
Kshetra Samachara
06/05/2022 10:01 am