ವಿಶೇಷ ವರದಿ: ರಹೀಂ ಉಜಿರೆ
ಕಾರ್ಕಳ: ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಕಲ್ಲಚ್ಚಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕ್ರಶರ್ ನಿಂದಾಗಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಪ್ರತಿನಿಧಿಸುವ ಕ್ಷೇತ್ರವಿದು. ಸಚಿವರಿಗೆ ಈ ಸಂಬಂಧ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಇಲ್ಲಿ ಪ್ರತಿನಿತ್ಯ ಕಲ್ಲುಕೋರೆಯಲ್ಲಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಡೈನಮೈಟ್ ಸ್ಫೋಟದಿಂದಾಗಿ ಸಾಕಷ್ಟು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಇನ್ನು ಕ್ರಶರ್ ನ ಧೂಳಿನಿಂದಾಗಿ ಗ್ರಾಮಸ್ಥರು ನರಕಯಾತನೆ ಪಡುವಂತಾಗಿದೆ. ಈ ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು ಮುನ್ನೂರು ಎಕರೆಯಷ್ಟು ಕೃಷಿ ಭೂಮಿ ಇದೆ. ಕ್ರಶರ್ ನ ಸ್ಫೋಟಕ, ಧೂಳು ಮತ್ತು ಸಿಡಿಯುವ ಕಲ್ಲಿನಿಂದಾಗಿ ಗ್ರಾಮದ ಜನರು ಭಯಭೀತಿಯಿಂದ ಬದುಕುವಂತಾಗಿದೆ.
ಇದೇ ತಿಂಗಳ ಪ್ರಾರಂಭದಲ್ಲಿ ಗ್ರಾಮಸ್ಥರು ಒಟ್ಟಾಗಿ ಈ ಅಕ್ರಮ ಕ್ರಶರ್ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸುನಿಲ್ ಕುಮಾರ್ ಶಾಸಕರಾಗಿದ್ದಾಗಲೇ ಜನರು ಮನವಿ ನೀಡಿ ಅಕ್ರಮ ಕಲ್ಲುಕೋರೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದರು. ಆದರೆ, ಪರಿಣಾಮ ಮಾತ್ರ ಶೂನ್ಯ.
ಒಟ್ಟಾರೆ ಸಚಿವರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಕೋರೆ ಸ್ಥಗಿತಗೊಳಿಸಲು ಗ್ರಾಮಸ್ಥರ ಜೊತೆಗೆ ರೈತ ಸಂಘ ಕೂಡ ಕೈ ಜೋಡಿಸಿದೆ. ತಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಇತ್ತ ಕಡೆ ಗಮನ ಹರಿಸಬೇಕಿದೆ.
PublicNext
21/04/2022 07:38 pm