ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಟುಂಬಗಳಿಗಾಗಿ ವಿಶೇಷ ಗ್ರಾಮ ಸಭೆ ಗ್ರಾಪಂ ಸಭಾಭವನದಲ್ಲಿ ನಡೆಯಿತು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರು ವಹಿಸಿದ್ದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿ ವಿಜಯಕುಮಾರ್ ಮಾತನಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಸರಕಾರ ಅನೇಕ ಸವಲತ್ತುಗಳನ್ನು ಒದಗಿಸಿದೆ ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಈ ವೇಳೆ ಗ್ರಾಮಸ್ಥರೊಬ್ಬರು ಮಾತನಾಡಿ ಮಕ್ಕಳ ಪಿಯುಸಿ ಶೈಕ್ಷಣಿಕ ವರ್ಷಕ್ಕೆ ಪ್ರೋತ್ಸಾಹ ಧನ ಬಂದಿಲ್ಲ ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರು ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಹಿಳೆಗೆ ಬೆಂಬಲ ಸೂಚಿಸಿ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಗ್ರಾಮ ಸಭೆಗೆ ಅಧಿಕಾರಿಗಳು ಬರುವಾಗ ಮಾಹಿತಿ ಪಡೆದುಕೊಂಡು ಬರಬೇಕು. ಹಾಗೂ ಗ್ರಾಮಸ್ಥರಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪುಸ್ತಕ ಒದಗಿಸಬೇಕು , ಗ್ರಾಪಂ ವ್ಯಾಪ್ತಿಯಲ್ಲಿ ಈ ಅನೇಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಈಗಲೂ ರೇಷನ್ ಕಾರ್ಡ್ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಇಲಾಖೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಅಧಿಕಾರಿ ಅಬ್ದುಲ್ ಬಷೀರ್ ರವರು ಎರೆಹುಳ ಸಾಕಾಣಿಕೆಗೆ ಮಹತ್ವನೀಡಿ, ಬೆಳೆ ವಿಮೆ ಮಾಡಿಸಿ ಎಂದರು. ಮುಲ್ಕಿ ಪೊಲೀಸ್ ಠಾಣೆಯ ಎಎಸ್ ಐ ಕೃಷ್ಣಪ್ಪ ಮಾತನಾಡಿ ಗ್ರಾಮಸ್ಥರ ಸಮಸ್ಯೆಗೆ 112 ದೂರವಾಣಿ ಸಂಪರ್ಕಿಸಿ ಹಾಗೂ ಸೈಬರ್ ಕ್ರೈಮ್ ವಂಚಕರ ಬಗ್ಗೆ ಎಚ್ಚರವಹಿಸಿ, ಅಕ್ರಮಗಳು ಹಾಗೂ ಮಾದಕ ದ್ರವ್ಯ ಸಾಗಾಟದ ಬಗ್ಗೆ ಮಾಹಿತಿ ನೀಡಿ ಎಂದರು.
ಕಂದಾಯ ಇಲಾಖೆ ಅಧಿಕಾರಿ ಮೋಹನ್ ಖಾತಾ ಬದಲಾವಣೆ ಸಹಿತ ಅನೇಕ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
19/04/2022 04:48 pm