ಮಂಗಳೂರು: ಮಂಗಳೂರಿನ ಎಸ್ ಈ ಝಡ್ ನಲ್ಲಿರುವ ಶ್ರೀಉಲ್ಕ ಫಿಶ್ ಮೀಲ್ ವಿಷಾನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಎಸ್ ಡಿಪಿಐ ನಾಯಕರು ಸುದ್ದಿಗೋಷ್ಟಿ ನಡೆಸಿದರು.
ಕಾರ್ಖಾನೆ ಕಾಯ್ದೆ ಪ್ರಕಾರ ಸಾಯಂಕಾಲ 6 ಗಂಟೆ ನಂತರ ಡ್ರೈನೇಜ್ ಗೆ ಇಳಿಸುವಂತಿಲ್ಲ. ಕಂಪೆನಿಯಲ್ಲಿ ಯಾವುದೇ ಸುರಕ್ಷತಾ ಸಾಧನ ಇರಲಿಲ್ಲ. ಆಕ್ಸಿಜನ್ ಮಾಸ್ಕ್, ಮೇಲಕ್ಕೆತ್ತಲು ಹಗ್ಗ, ಹುಕ್ ಬೆಲ್ಟ್, ಮಾಸ್ಕ್ , ಗ್ಲೌಸ್ ನೀಡಲಾಗಿರಲಿಲ್ಲ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಆರೋಪಿಸಿದ್ದಾರೆ.
ಕೊನೆ ಪಕ್ಷ ಆ್ಯಂಬುಲೆನ್ಸ್ ಕೂಡ ಅಲ್ಲಿರಲಿಲ್ಲ. ಕಂಪೆನಿ ನಿರ್ಲಕ್ಷ್ಯಕ್ಕೆ ಐದು ಅಮಾಯಕ ಜೀವ ಬಲಿಯಾಗಿದೆ. ಕಾರ್ಮಿಕರನ್ನು ಎಸ್ ಈ ಝಡ್ ಕಂಪೆನಿಗಳಲ್ಲಿ ಜೀತದಾಳುಗಳಂತೆ ಕೆಲಸ ಮಾಡಿಸಲಾಗುತ್ತಿದೆ. ದಿನವೊಂದಕ್ಕೆ 300-400 ರೂ. ಅಷ್ಟೇ ವೇತನ ನೀಡಲಾಗ್ತದೆ. 12 ಗಂಟೆ ದುಡಿಸುತ್ತಿದ್ದಾರೆ. ಇಫ್ತಾರ್ ಸಮಯದಲ್ಲೂ ಯಾವುದೇ ವಿನಾಯಿತಿ ನೀಡುತ್ತಿರಲಿಲ್ಲ ಎಂದರು.
ಇಂತಹ ಕಂಪೆನಿಯಲ್ಲಿ ದುಡಿಯುವ ಕಾರ್ಮಿಕರ ಬಗ್ಗೆ ಇಲಾಖೆಯಲ್ಲಿ ಮಾಹಿತಿಯೇ ಇಲ್ಲ. ಲೈಸೆನ್ಸ್ ನೀಡಿದ ಇಲಾಖಾ ಅಧಿಕಾರಿ ಹಾಗೂ ಕಾರ್ಖಾನೆ ಮಾಲೀಕರ ಮೇಲೆ ಕಠಿಣ ಕ್ರಮವಾಗಲಿ. ಮೃತರ ಕುಟುಂಬಸ್ಥರಿಗೆ ಸರಕಾರ, ಕಂಪೆನಿಯಿಂದ ತಲಾ 25 ಲಕ್ಷ ಪರಿಹಾರ ನೀಡಲಿ. ಪರಿಹಾರ ನೀಡದಿದ್ದಲ್ಲಿ ಕಂಪೆನಿ ತೆರೆಯಲು ಬಿಡುವುದಿಲ್ಲ ಎಂದು ಎಸ್ ಡಿಪಿಐ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಟಿಯಲ್ಲಿ ಘಟನೆಯ ಪ್ರತ್ಯಕ್ಷದರ್ಶಿ ಕಾರ್ಮಿಕ ಹಾಗೂ ಮೃತ ಕಾರ್ಮಿಕರ ಕುಟುಂಬಸ್ಥರು ಉಪಸ್ಥಿತರಿದ್ದರು.
Kshetra Samachara
18/04/2022 10:47 pm