ಮಂಗಳೂರು; ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿರುವ ದಕ್ಷಿಣಕನ್ನಡ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಬಯಲು ಕಸಾಲಯವಾಗಿ ಬದಲಾಗುತ್ತಿದೆ. ಪ್ರತೀ ಗ್ರಾಮಪಂಚಾಯತ್ ಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಕೇಂದ್ರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನಗಳನ್ನೂ ನೀಡಲಾಗುತ್ತಿದೆ. ಆದರೆ ಸುಶಿಕ್ಷಿತರೇ ಇರುವ ದಕ್ಷಿಣಕನ್ನಡ ಜಿಲ್ಲೆ ಮಾತ್ರ ಕೇಂದ್ರ ಸರಕಾರದ ಸ್ವಚ್ಛ ಭಾರತ್ ಪರಿಕಲ್ಪನೆಗೆ ಕಸದ ರಾಶಿ ಮೂಲಕ ಸಡ್ಡು ಹೊಡೆಯಲು ತೀರ್ಮಾನಿಸಿದೆ.
ಜಿಲ್ಲಾ ಪಂಚಾಯತ್ ರಸ್ತೆಯಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲೆಲ್ಲಾ ಕಸಗಳೇ ತುಂಬಿ ತುಳುಕುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರತೀ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಆಯಾಯ ಗ್ರಾಮಪಂಚಾಯತ್ ಗಳು ಸಂಗ್ರಹ ಮಾಡಿ ವಿಲೇವಾರಿ ಮಾಡುವುದಕ್ಕೋಸ್ಕರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನವನ್ನೂ ನೀಡುತ್ತಿದೆ. ಆದರೆ ಈ ಯೋಜನೆಯನ್ನು ಸಮರ್ಪಕವಾಗಿ ಬಳಸದೆ, ನಿರ್ಲಕ್ಷಿಸಿರುವ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕಸಗಳಲ್ಲೇ ಸಾಮ್ರಾಜ್ಯವಿದೆ.
ಮನೆಯಲ್ಲಿ ಸಂಗ್ರಹವಾಗುವ ಕಸಗಳನ್ನು ಒಣ, ಹಸಿ ಕಸಗಳೆಂದು ವಿಂಗಡಿಸಿ, ಸಂಗ್ರಹ ಮಾಡುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಹಲವು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯನ್ನೂ ಈವರೆಗೂ ಆರಂಭಿಸಿಲ್ಲ. ಅದರಲ್ಲೂ ರಾಜ್ಯದ ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಮಾತ್ರ ಕಸಗಳ ಕಾರುಬಾರು ಹೆಚ್ಚಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಕೊಣಾಜೆ, ಕಿನ್ಯಾ, ತಲಪಾಡಿ, ಉಳ್ಳಾಲ, ದೇರಳಕಟ್ಟೆ ಮೊದಲಾದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಪರಿಸರ ಹೋರಾಟಗಾರರು ಹಲವು ಬಾರಿ ತಂದರೂ, ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳಲಾಗಿಲ್ಲ. ಪ್ಲಾಸ್ಟಿಕ್ ಕಸಗಳನ್ನು ಕಡ್ಡಾಯವಾಗಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದ ನಡುವೆಯೇ ಪ್ಲಾಸ್ಟಿಕ್ ಕಸಗಳನ್ನು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಉರಿಸಲಾಗುತ್ತಿದೆ ಎನ್ನುತ್ತಾರೆ ದಕ್ಷಿಣಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಸೀನ ಶೆಟ್ಟಿ.
Kshetra Samachara
23/03/2022 09:14 am