ಕಾಪು: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಣಿಯೂರು (ಪಡುಬಿದ್ರಿ) ರೈಲ್ವೇ ಸ್ಟೇಷನ್‌ಗೆ ಹೋಗುವ ರಸ್ತೆಯ ಇಕ್ಕೆಲವು ತ್ಯಾಜ್ಯ ಮತ್ತು ಕಸದ ಕೊಂಪೆಯಾಗಿ ಮಾರ್ಪಟ್ಟಿದೆ.
ರೈಲ್ವೇ ಸ್ಟೇಷನ್‌ಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು ಅಸಹನೀಯವಾಗಿ ಕಾಣುತ್ತಿದೆ. ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕವು ಎಲ್ಲೂರು ಮತ್ತು ಬೆಳಪು ಗ್ರಾಮ ಪಂಚಾಯತ್ ನಡುವೆ ಹಂಚಿ ಹೋಗಿದ್ದು ಇಲ್ಲಿಗೆ ಕಸ ತಂದು ಸುರಿದು ಹೋಗುವವರನ್ನು ಪತ್ತೆ ಹಚ್ಚುವುದು ಸ್ಥಳೀಯ ಬೆಳಪು ಗ್ರಾಮ ಪಂಚಾಯತ್‌ಗೂ ಸವಾಲಾಗಿದೆ.
ಬೆಳಪು ಮತ್ತು ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾ. ಪಂ. ತ್ಯಾಜ್ಯ ಸಂಗ್ರಹಣಾ ವಾಹನವು ಮನೆ ಮನೆಗೆ ತೆರಳಿ ತ್ಯಾಜ್ಯ ಕಸ - ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೂ, ಸ್ಥಳೀಯರ ಅಸಹಕಾರದಿಂದಾಗಿ ಈ ರೀತಿಯಾಗಿ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡುವಂತಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಆಗಲೀ, ರೈಲ್ವೇ ಇಲಾಖೆಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಕಸ ತ್ಯಾಜ್ಯಗಳನ್ನು ನಾಯಿ, ನರಿಗಳು ರಸ್ತೆಯಲ್ಲೆಲ್ಲಾ ಚೆಲ್ಲಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವವರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಓಡಾಡುವಂತಾಗಿದೆ. ಸಂಬಂಧಪಟ್ಟವರೆಲ್ಲರೂ ಈ ರಸ್ತೆಯಲ್ಲೇ ದಿನನಿತ್ಯ ಓಡಾಡುತ್ತಿದ್ದರೂ, ಯಾರೂ ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ.
Kshetra Samachara
08/03/2022 03:15 pm