ವಿಶೇಷ ವರದಿ: ರಹೀಂ ಉಜಿರೆ
ಮಲ್ಪೆ ; ಕರಾವಳಿಗರ ಪ್ರಮುಖ ಉದ್ಯೋಗ ಮೀನುಗಾರಿಕೆ. ಸಾವಿರಾರು ಕುಟುಂಬಗಳು ಮತ್ಸ್ಯೋದ್ಯಮವನ್ನೇ ಅವಲಂಬಿಸಿವೆ. ಮೀನುಗಾರರಿಗೆ ನೆರವಾಗಲೆಂದು ಕೇಂದ್ರ ಸರಕಾರ ಸೀಮೆಎಣ್ಣೆ ಸಬ್ಸಿಡಿ ನೀಡುತ್ತಿದೆ. ಆದರೆ ಈ ಬಾರಿ ನಾಡದೋಣಿ ಮೀನುಗಾರರಿಗೆ ನೀಡಬೇಕಿದ್ದ ಸಬ್ಸಿಡಿ ಸೀಮೆಎಣ್ಣೆ ಇನ್ನೂ ಬಿಡುಗಡೆ ಮಾಡಿಲ್ಲ.ಅದೇ, ಪಕ್ಕದ ಕೇರಳಕ್ಕೆ ಸಂಪೂರ್ಣ ಪ್ರಮಾಣದ ಸೀಮೆಎಣ್ಣೆ ಸಬ್ಸಿಡಿ ನೀಡಿ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ!
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಬ್ಸಿಡಿ ಸೀಮೆ ಎಣ್ಣೆಗೆ ಅರ್ಹವಾಗಿರುವ 4,514 ದೋಣಿಗಳಿವೆ. ಡಿಸೆಂಬರ್‌ನಿಂದ ಮುಂದಿನ ಮಾರ್ಚ್ ವರೆಗೆ 5,115 ಕಿ.ಲೀ. ಸಿಗಬೇಕಿದೆ. ಡಿಸೆಂಬರ್ ಮುಗಿದರೂ ಆ ತಿಂಗಳದ್ದು ಇನ್ನೂ ಸಿಕ್ಕಿಲ್ಲ. ಈಗ ಉತ್ತಮ ಮೀನಿನ ಸೀಸನ್ ಆಗಿದ್ದು, ಸಕಾಲದಲ್ಲಿ ಸೀಮೆಎಣ್ಣೆ ಸಿಗದೇ ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ರಾಜ್ಯಕ್ಕೆ ಸಬ್ಸಿಡಿ ಸೀಮೆ ಎಣ್ಣೆ ಬಿಡುಗಡೆ ವಿಳಂಬವಾಗಿದ್ದರೂ ನೆರೆಯ ಕೇರಳಕ್ಕೆ ಕಾಲಕಾಲಕ್ಕೆ ಪೂರೈಕೆಯಾಗುತ್ತಿದೆ. ನಮಗೆ ಮಾತ್ರ ಯಾಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎನ್ನುವ ಸಹಜ ಪ್ರಶ್ನೆ ಮೀನುಗಾರರದ್ದಾಗಿದೆ.
ಸಬ್ಸಿಡಿ ಸೀಮೆಎಣ್ಣೆ ಬಾಕಿ ಬಿಡುಗಡೆ ಬಗ್ಗೆ ಮೀನುಗಾರರು, ಬೆಂಗಳೂರಿಗೆ ಹೋಗಿ ಹಲವು ಬಾರಿ ಸಂಬಂಧ ಪಟ್ಟವರಿಗೆ ಮನವರಿಕೆ ಮಾಡಿದ್ದಾರೆ. ಕೇಂದ್ರ ಸಚಿವರು, ಮೀನುಗಾರಿಕೆ ಸಚಿವರು, ಇಲಾಖಾ ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದಾರೆ. ಆದರೂ ಪ್ರಯೋಜನ ಮಾತ್ರ ಶೂನ್ಯ.ಹೀಗಾಗಿ ಇನ್ನು ಒಂದು ವಾರ ಕಾಯುತ್ತೇವೆ. ಅಷ್ಟರೊಳಗೆ ಕೊಡದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ ಎನ್ನುವ ಎಚ್ಚರಿಕೆ ನೀಡಿದ್ದಾರೆ ರಾಜ್ಯದ ಮೀನುಗಾರರು.
Kshetra Samachara
09/01/2022 05:14 pm