ಮಾರ್ಪಳ್ಳಿ: ಮಾರ್ಪಳ್ಳಿ- ಚಿಕ್ಪಾಡಿಯನ್ನು ಸಂಪರ್ಕಿಸುವ ರಸ್ತೆಯು ತಾಪಂಡೆ ನಾಗಬನದ ಬಳಿ ಕುಸಿದಿದ್ದು, ಅಪಾಯ ಆಹ್ವಾನಿಸುತ್ತಿದೆ. ಮಾರ್ಪಳ್ಳಿ ಒಳರಸ್ತೆ ಮೂಲಕ ದಿನನಿತ್ಯ ಸಾವಿರಾರು ವಾಹನಗಳು ಉಡುಪಿಯತ್ತ ಬರುತ್ತಿದ್ದು ತಾಪಂಡೆ ನಾಗಬನದ ಬಳಿ ಕಾಲು ಸಂಕ ಕುಸಿದಿದೆ. ಈ ಪರಿಣಾಮ ರಸ್ತೆ ಮಧ್ಯೆ ಬೃಹತ್ ಹೊಂಡ ನಿರ್ಮಾಣವಾಗಿ ರಸ್ತೆ ಭೂ ಒಡಲಿಗೆ ಸೇರುವ ಅಪಾಯ ಎದುರಾಗಿದೆ.
ಬೆಳಗ್ಗೆ ಹೊತ್ತು ಮಕ್ಕಳ ಶಾಲಾ ಬಸ್ ಗಳು ಈ ರಸ್ತೆ ಮೂಲಕವೇ ಸಾಗುತ್ತಿದ್ದು, ಘನ ವಾಹನಗಳ ಸಂಚಾರವೂ ಇರುವುದರಿಂದ ರಸ್ತೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ. ಈಗಾಗಲೇ ರಸ್ತೆ ಮೇಲ್ಭಾಗ ದೊಡ್ಡ ಬಿರುಕು ಉಂಟಾಗಿದ್ದು, ಒಂದು ಬದಿ ಮಣ್ಣು ಸಂಪೂರ್ಣ ಕುಸಿದಿದೆ. ತಕ್ಷಣ ದುರಸ್ತಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಗರಸಭೆ ವಾರ್ಡ್ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
Kshetra Samachara
30/12/2021 03:46 pm