ಮಂಗಳೂರು: ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಸಾಲಸೌಲಭ್ಯದ ಬಗ್ಗೆ ಸೂಕ್ತ ಮಾಹಿತಿಯನ್ನು ಬ್ಯಾಂಕ್ ಗಳು ಒದಗಿಸಬೇಕು. ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಸವಲತ್ತುಗಳನ್ನು ಒದಗಿಸಿಕೊಡಲು ಜಿಲ್ಲೆಯ ಬ್ಯಾಂಕ್ ಗಳು ಶ್ರಮಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಕರೆ ನೀಡಿದರು.
ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿಸಿಸಿ ಹಾಗೂ ಡಿ.ಎಲ್.ಆರ್.ಸಿ ಸಮಿತಿ ಸದಸ್ಯರ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕುಗಳು ಸರ್ಕಾರದಿಂದ ನೀಡಲಾಗುವ ಸಾಲಸೌಲಭ್ಯಗಳ ಲಾಭ ಪಡೆಯಲು ಶ್ರಮಿಸಬೇಕು. ಜನಧನ್ ಖಾತೆ ಬಗ್ಗೆ ಸರಿಯಾದ ಮಾಹಿತಿ ಒದಗಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ದಕ್ಷಿಣ ಕನ್ನಡವನ್ನು ಶೇ.100ರಷ್ಟು 'ಭಿಮಾ ಜಿಲ್ಲೆ' ಎಂದು ಘೋಷಿಸುವ ನಿಟ್ಟಿನಲ್ಲಿ ಬ್ಯಾಂಕ್‍ಗಳು ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ(ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ), ಪಿಎಂಎಸ್‍ಬಿವೈ(ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನಾ) ಹಾಗೂ ಎಪಿವೈ(ಅಟಲ್ ಪಿಂಚಣಿ ಯೋಜನಾ)ಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನಿಡಬೇಕು. ಆರ್ ಬಿಐ ಕೂಡ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಗುರಿ ಸಾಧಿಸುವಂತೆ ಸೂಚನೆ ನೀಡಿದೆ. ಬ್ಯಾಂಕ್ ಮ್ಯಾನೇಜರ್ ಗಳು ಈ ಬಗ್ಗೆ ಗಮನ ಹರಿಸಿ ಗ್ರಾಮೀಣ ಜನತೆಯನ್ನು ಈ ಯೋಜನೆ ತಲುಪುವಂತೆ ಮಾಡಬೇಕು ಎಂದು ಡಾ.ಕುಮಾರ್ ಹೇಳಿದರು.
Kshetra Samachara
22/12/2021 07:46 pm