ಸುಬ್ರಹ್ಮಣ್ಯ : ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ನಾನಾ ಅಭಿವೃದ್ಧಿ ಕೆಲಸಗಳು ನಡೆಯದಿರುವುದರಿಂದ ಪ್ರಯಾಣಿಕರು ನಿತ್ಯ ವೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸುಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸಂದರ್ಶಿಸಲು ಆಗಮಿಸುವ ಭಕ್ತಾದಿಗಳೂ ಈ ರೈಲು ನಿಲ್ದಾಣದ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿದ್ದಾರೆ.
* ಪಾದಚಾರಿ ಮೇಲ್ಸೇತುವೆ: ಇಲ್ಲಿನ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಿಸಲಾಗಿದ್ದರೂ ಪಾದಚಾರಿ ಮೇಲ್ಸೇತುವೆ ಇನ್ನೂ ನಿರ್ಮಾಣಗೊಂಡಿಲ್ಲ. 2 ವರ್ಷಗಳ ಹಿಂದೆ ಈ ಬಗ್ಗೆ ಟೆಂಡರ್ ಕರೆದರೂ ಕಾಮಗಾರಿ ನಡೆಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪಾದಚಾರಿ ಮೇಲ್ಸೇತುವೆ ಇಲ್ಲದಿರುವುದರಿಂದ ಆ ಬದಿಯ ಪ್ಲಾಟ್‌ಫಾರಂನಲ್ಲಿ ಬಂದಿಳಿಯುವ ಪ್ರಯಾಣಿಕರು ಹಳಿಗೆ ಇಳಿದು ಹಳಿಯಲ್ಲೇ ನಡೆಯುತ್ತಾ ಬಂದು ಈ ಭಾಗದ ಪ್ಲಾಟ್‌ಫಾರಂನ್ನು ಜೀವದ ಹಂಗು ತೊರೆದು ಹತ್ತಬೇಕಾಗಿದೆ. ಪ್ಲಾಟ್‌ಫಾರಂ 2ರಲ್ಲಿ ಪ್ರಯಾಣಿಕರಿಗೆ ನಿಲ್ಲಲೂ ವ್ಯವಸ್ಥೆಯಿಲ್ಲ!
* ಸ್ಟೇಷನ್ ಟಿಕೆಟ್ ಇಲ್ಲ!: ರಾತ್ರಿ ವೇಳೆ ಇಲ್ಲಿ ರೈಲು ಬಂದಾಗ ಟಿಕೆಟ್ ವ್ಯವಸ್ಥೆ ಇಲ್ಲ. ಕೌಂಟರ್ ಇದ್ದರೂ ಟಿಕೆಟ್ ನೀಡಲು ಆದೇಶ ಇಲ್ಲ ಎನ್ನಲಾಗಿದೆ. ಯಾತ್ರಾರ್ಥಿಗಳು ಮಾಹಿತಿ ಕೊರತೆಯಿಂದ ರಾತ್ರಿ ನಿಲ್ಧಾಣಕ್ಕೆ ಬಂದಲ್ಲಿ ಟಿಕೆಟ್ ಅಲಭ್ಯತೆಯಿಂದ ನಿಲ್ದಾಣದಲ್ಲೇ ಕಳೆಯಬೇಕಾಗಿದೆ. ವಿಜಯಪುರ ಎಕ್ಸ್ ಪ್ರೆಸ್, ಕಾರವಾರ-ಬೆಂಗಳೂರು, ಮಂಗಳೂರು-ಬೆಂಗಳೂರು, ಕಣ್ಣೂರು-ಬೆಂಗಳೂರು ಹೀಗೆ ನಾನಾ ಕಡೆಯ ರೈಲು ಇಲ್ಲಿ ರಾತ್ರಿ- ಹಗಲು ನಿಲುಗಡೆಯಾಗುತ್ತಿದ್ದು, ಇವುಗಳಿಗೆ ಇಲ್ಲೇ ಟಿಕೆಟ್ ವ್ಯವಸ್ಥೆ ಆಗಬೇಕೆಂಬ ಬೇಡಿಕೆಯಿದೆ.
* ಹೆಲ್ತ್, ಪೊಲೀಸ್ ಔಟ್‌ಪೋಸ್ಟ್: ಇಲ್ಲಿ ಪೊಲೀಸ್ ಹೊರಠಾಣೆ, ತುರ್ತು ವೈದ್ಯಕೀಯ ಕೇಂದ್ರದ ವ್ಯವಸ್ಥೆ ಇಲ್ಲ. ದೂರದ ಕಡಬ ಅಥವಾ ಸುಬ್ರಹ್ಮಣ್ಯಕ್ಕೆ ತೆರಳಬೇಕಾದ ಪರಿಸ್ಥಿತಿ.
* ಶೌಚಾಲಯ ಕಾಮಗಾರಿ ಅಪೂರ್ಣ: ಇಲ್ಲಿ ಶೌಚಾಲಯ ಕಾಮಗಾರಿ ಆರಂಭಿಸಿ ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಬಸ್ ತಂಗುದಾಣ, ರಿಕ್ಷಾ, ಟೂರಿಸ್ಟ್ ವಾಹನ ನಿಲ್ದಾಣವೂ ಇಲ್ಲಿ ಇಲ್ಲ.
* ಮೇಲ್ಧರ್ಜೆಗೇರಿಸಲು ಆಗ್ರಹ: ಈ ನಿಲ್ದಾಣವನ್ನು ಪುತ್ತೂರಿನ ಆದರ್ಶ ರೈಲು ನಿಲ್ದಾಣದಂತೆಯೇ ಅಭಿವೃದ್ಧಿ ಉದ್ದೇಶದಿಂದ ಮೇಲ್ಧರ್ಜೆಗೇರಿಸಬೇಕೆಂಬ ಕೂಗು ಹೆಚ್ಚಾಗಿದೆ.
* ʼಕುಕ್ಕೆ ಸುಬ್ರಹ್ಮಣ್ಯʼ ನಾಮಕರಣಕ್ಕೆ ಒತ್ತಾಯ: ನೆಟ್ಟಣದ ಈ ರೈಲು ನಿಲ್ಧಾಣಕ್ಕೆ ಪ್ರಸ್ತುತ ಸುಬ್ರಹ್ಮಣ್ಯ ರೋಡ್ ನಿಲ್ದಾಣವೆಂಬ ಹೆಸರಿದ್ದು, ಬದಲಿಗೆ ʼಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣʼ ಹೆಸರನ್ನು ಮರು ನಾಮಕರಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಸಲಹಾ ಸಮಿತಿ ಸಲ್ಲಿಸಿದೆ.
Kshetra Samachara
21/12/2021 12:17 pm