ಕೋಟ: ಬ್ರಹ್ಮಾವರ ತಾಲೂಕು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿಯ ದೊಡ್ಡ ಹೊಳೆಗೆ ಇಲ್ಲಿನ ಸ್ಥಳೀಯ ವಸತಿ ಸಂಕೀರ್ಣಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಬಿಡುತ್ತಿದ್ದು ಇದರಿಂದ ಹೊಳೆ ನೀರು ಸಂಪೂರ್ಣ ಕಲುಷಿತವಾಗಿ ಕೃಷಿ ನಡೆಸಲು ಅಸಾಧ್ಯವಾಗಿರುವ ಕುರಿತು ಗ್ರಾಮಸ್ಥರು ಪ.ಪಂ.ಗೆ ದೂರು ನೀಡಿದ್ದರು. ಈ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಪಟ್ಟಣ ಪಂಚಾಯತ್ ಮುಖ್ಯಸ್ಥರು ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಸಂಪರ್ಕವನ್ನು ತೆರವುಗೊಳಿಸಿದ ಘಟನೆ ಇಂದು ನಡೆಯಿತು.
ಇಲ್ಲಿನ ತಸ್ಮಯ್ ರೆಸಿಡೆನ್ಸಿ ಹಾಗೂ ಕಮಲಮ್ಮ ವಸತಿ ಸಂಕೀರ್ಣ , ಸುವರ್ಣ ರೆಸಿಡೆನ್ಸಿಗಳು ತ್ಯಾಜ್ಯ ನೀರನ್ನು ಹೊಳೆಗೆ ಸಂಪರ್ಕಿಸಿದ ಬಗ್ಗೆ ಗ್ರಾಮಸ್ಥರ ಆರೋಪವಿತ್ತು ಹಾಗೂ ಈ ಬಗ್ಗೆ ತತ್‌ಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರೇ ಕಾನೂನು ಕೈಗೆತ್ತಿಕೊಳ್ಳುತ್ತೇವೆ ಹಾಗೂ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ನೀವೇ ಜವಬ್ದಾರರಾಗುತ್ತೀರಿ ಎಂದು ಗ್ರಾಮಸ್ಥರು ಪಟ್ಟಣ ಪಂಚಾಯತ್‌ಗೆ ಎಚ್ಚರಿಕೆ ನೀಡಿದರು.
ಸದಸ್ಯ ರಾಜು ಪೂಜಾರಿ ಕಾರ್ಕಡ ಮಾತನಾಡಿ, ಅಕ್ರಮ ಕಟ್ಟಡಗಳು ಹಾಗೂ ತ್ಯಾಜ್ಯ ನೀರನ್ನು ಸಾರ್ವಜನಿಕ ಪ್ರದೇಶಕ್ಕೆ ಬಿಡುವುದರ ವಿರುದ್ಧ ಕ್ರಮಕೈಗೊಳ್ಳಲು ಯಾವುದೇ ನೋಟೀಸು ನೀಡುವ ಅಗತ್ಯವಿಲ್ಲ. ನೇರವಾಗಿ ಪೊಲೀಸ್‌ರೊಂದಿಗೆ ಸ್ಥಳಕ್ಕೆ ತೆರಳಿ ಕ್ರಮಕೈಗೊಳ್ಳಬಹುದು. ದಯವಿಟ್ಟು ಗ್ರಾಮಸ್ಥರ ಭಾವನೆಗಳಿಗೆ ಬೆಲೆ ನೀಡಿ ಎಂದರು. ಆಡಳಿತ ವ್ಯವಸ್ಥೆ ಕಠಿಣ ಕ್ರಮ ತೆಗೆದುಕೊಳ್ಳಿ. ಸದಸ್ಯರು ಸದಾ ನಿಮ್ಮ ಜತೆಗಿರುತ್ತೇವೆ ಎಂದು ಸ್ಥಾಯಿ ಸಮಿತಿ ಸದಸ್ಯ ಸಂಜೀವ ದೇವಾಡಿಗ, ಸದಸ್ಯ ಕರುಣಾಕರ ಅವರು ಮುಖ್ಯಾಧಿಕಾರಿ ಶಿವ ನಾಯ್ಕ್ ಅವರಿಗೆ ತಿಳಿಸಿದರು. ಆಗ ಈ ಬಗ್ಗೆ ತತ್‌ಕ್ಷಣ ಕ್ರಮಕೈಗೊಳ್ಳುವುದಾಗಿ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಭರವಸೆ ನೀಡಿದರು ಹಾಗೂ ಸ್ಥಳಕ್ಕೆ ತೆರಳಲು ತಯಾರಿ ನಡೆಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅನಂತರ ಜೇಸಿಬಿ ಹಾಗೂ ಪೌರಕಾರ್ಮಿಕರೊಂದಿಗೆ ಇಲ್ಲಿನ ಕಮಲ್ಮ್ಮ ವಸತಿ ಸಂಕೀರ್ಣದ ಬಳಿ ತೆರಳಿದ ಪ.ಪಂ. ಮುಖ್ಯಸ್ಥರು ಪೈಪ್ಲೈನ್ ಸಂಪರ್ಕವನ್ನು ತೆರವುಗೊಳಿಸಿದರು ಹಾಗೂ ತಸ್ಮಯ್ ರೆಸಿಡೆನ್ಸಿ, ಸುವರ್ಣ ರೆಸಿಡಿನ್ಸಿ ವಿರುದ್ಧ ಗುರುವಾರ ಇದೇ ರೀತಿಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪ.ಪಂ. ಉಪಾಧ್ಯಕ್ಷೆ ಅನುಸೂಯ ಹೇರ್ಳೆ, ಸದಸ್ಯರಾದ ಶ್ಯಾಮ್‌ಸುಂದರ್ ನಾರಿ ಹಾಗೂ ಸ್ಥಳೀಯ ವಾರ್ಡ್ ಸದಸ್ಯ ಸುಕನ್ಯಾ ಶೆಟ್ಟಿ, ನಾಗರೀಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
05/10/2021 09:24 pm