ಹಾಸನ: ರಾಷ್ಟ್ರೀಯ ಹೆದ್ದಾರಿ 75 (48) ರ ಬೆಂಗಳೂರು - ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೊಣಿಗಲ್‌ವರೆಗಿನ ಹಾಸನ ಜಿಲ್ಲಾ ವ್ಯಾಪ್ತಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಮಂಗಳವಾರದಿಂದ ಎಲ್ಲ ಬಗೆಯ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಹಾಸನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್. ಗಿರೀಶ್ ಆದೇಶಿಸಿದ್ದಾರೆ.
ಜುಲೈ 22 ರಂದು ದೊಣಿಗಲ್ ಸಮೀಪ ಭೂ ಕುಸಿತ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು. ಈಗ ರಸ್ತೆ ದುರಸ್ತಿಯಾಗಿದ್ದು, ಎಲ್ಲ ವಾಹನ ಸಂಚಾರಕ್ಕೆ ಅನುಮತಿ ನೀಡಬಹುದೆಂದು ಎನ್‌ಎಚ್‌ಎಐ ಎಂಜಿನಿಯರುಗಳು ಶಿಫಾರಸು ಮಾಡಿದ್ದರು. ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಈ ರಸ್ತೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಿಬಂದಿಯನ್ನು ನಿಯೋಜಿಸಲು ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡದ ಪ್ರಮುಖ ಸಂಪರ್ಕ ಕೊಂಡಿ ಶಿರಾಡಿ ಘಾಟ್ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೂ ಮುಕ್ತವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
29/09/2021 05:05 pm