ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಮಾಗಂದಡಿ ಪರಿಶಿಷ್ಟ ಪಂಗಡ ಕಾಲೋನಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರೂ ಸಂಬಂಧಪಟ್ಟ ಗುತ್ತಿಗೆದಾರರು ಇದುವರೆಗೂ ಕಾಮಗಾರಿ ದುರಸ್ತಿ ಪಡಿಸಿಲ್ಲ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆದಿದ್ದು 2 ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿದೆ. ರಸ್ತೆಯಲ್ಲಿ ಮಕ್ಕಳು, ವಯೋವೃದ್ದರು ನಡೆದಾಡುತ್ತಿದ್ದು ಹಾಗೂ ವಾಹನ ಚಲಿಸುತ್ತಿದ್ದು ಆತಂಕ ಎದುರಾಗಿದೆ ಎಂಬ ಸ್ಥಳೀಯರ ದೂರಿನ ಅನ್ವಯ "ಪಬ್ಲಿಕ್ ನೆಕ್ಸ್ಟ್" ನಲ್ಲಿ ವರದಿ ಪ್ರಕಟವಾಗಿದ್ದು ಕೂಡಲೇ ಎಚ್ಚೆತ್ತ ಶಾಸಕರು ಕಾರ್ಯಪ್ರವೃತ್ತರಾಗಿ ಕಳಪೆ ಕಾಮಗಾರಿಯನ್ನು ದುರಸ್ತಿ ಪಡಿಸುವಂತೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.
ಆದರೆ ತಿಂಗಳು ಕಳೆದರೂ ಇದುವರೆಗೂ ಸೂಕ್ತ ಕಾಮಗಾರಿ ನಡೆಸಿಲ್ಲ. ಗುತ್ತಿಗೆದಾರರು ಆಗಾಗ್ಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
Kshetra Samachara
15/09/2021 01:48 pm