ಮಂಗಳೂರು: ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲ್ವೆ ಪೊಲೀಸರ ಮೊಬೈಲ್ ಫೋನ್ ಸಂಖ್ಯೆಗಳನ್ನು ಒಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ರೈಲು ಪ್ರಯಾಣಿಕರಿಗೆ ವಿತರಣೆ ಮಾಡಲಾಗಿದೆ. ವಿಶೇಷವಾಗಿ ರೈಲ್ವೆ ಮಹಿಳಾ ಪ್ರಯಾಣಿಕರ ಹಿತದೃಷ್ಟಿಯಿಂದ 'ಸದಾ ನಿಮ್ಮ ಸೇವೆಯಲ್ಲಿ ರೈಲ್ವೆ ಪೊಲೀಸರು' ಎಂಬ ವಿನೂತನ ಸೇವೆಯನ್ನು ಮಂಗಳೂರು ರೈಲ್ವೆ ಪೊಲೀಸರು ಆರಂಭಿಸಿದ್ದಾರೆ.
ರೈಲ್ವೆ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರ ಸೂಚನೆಯಂತೆ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮಹಿಳೆಯರು, ವಯೋವೃದ್ಧರು ಅಸಹಾಯಕ ಪ್ರಯಾಣಿಕರ ನೆರವಿಗಾಗಿ ಸ್ಪಂದಿಸುವ ಉದ್ದೇಶದಿಂದ ಲೈಂಗಿಕ ದೌರ್ಜನ್ಯ, ಕಳವು, ದರೋಡೆ, ದುಷ್ಕೃತ್ಯ, ದುರ್ವರ್ತನೆ ತಡೆಯಲು ಅಲ್ಲದೆ ರೈಲಿನ ಬಗ್ಗೆ ಮಾಹಿತಿ ಇಲ್ಲದೆ ಪ್ರಯಾಣಿಕರು ಬೇರೆ ರೈಲು ಹತ್ತಿ ಪರದಾಟ ನಡೆಸುವ ಪರಿಸ್ಥಿತಿಯಲ್ಲಿ ಪ್ರಯಾಣಿಕರ ನೆರವಿಗೆ ಧಾವಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ.
ದಿನದ 24 ಗಂಟೆಯ ಅವಧಿಯಲ್ಲಿಯೂ ಈ ಸೇವೆ ಲಭ್ಯವಿದೆ. ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ತಕ್ಷಣ ರೈಲ್ವೆ ಪೊಲೀಸರ ಈ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಬಹುದು. ಕ್ಷಿಪ್ರವಾಗಿ ಪೊಲೀಸರು ಸ್ಪಂದಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.
Kshetra Samachara
29/07/2021 04:45 pm