ಬಂಟ್ವಾಳ: ಸಾಕಷ್ಟು ಸಂಚಾರದಟ್ಟಣೆ ಇರುವ ಹಾಗೂ ಪಾರ್ಕಿಂಗ್ ನ ಬೃಹತ್ ಸಮಸ್ಯೆಯನ್ನು ಎದುರಿಸುತ್ತಿರುವ ಬಿ.ಸಿ.ರೋಡ್ ನಲ್ಲಿ ಎದುರೆದುರೇ ತರಕಾರಿ, ಹಣ್ಣುಹಂಪಲು, ಕೂಲಿಂಗ್ ಗ್ಲಾಸ್, ಮೆಣಸುಗಳ ವ್ಯಾಪಾರಕ್ಕೆಂದು ಯಾವುದ್ಯಾವುದೋ ಊರಿನಿಂದ ಬಂದು ಹರಡಿ ಕುಳಿತರೆ ಸಮಸ್ಯೆ ದುಪ್ಪಟ್ಟಾಗುತ್ತದೆ. ಹಿಂದೆಲ್ಲ ಭಾನುವಾರವಷ್ಟೇ ಕಾಣಸಿಗುತ್ತಿದ್ದ ಬೀದಿ ವ್ಯಾಪಾರಿಗಳ ದರ್ಶನ ನಿತ್ಯವೂ ಆಗುತ್ತದೆ. ದೂರು ಬಂದಾಗ ಒಮ್ಮೆ ಅವರ ತೆರವಾಗುತ್ತದೆ. ಕೆಲ ದಿನಗಳ ಬಳಿಕ ಮತ್ತೆ ಅಲ್ಲೇ ಪ್ರತ್ಯಕ್ಷ.
ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ನಗರ ಬೀದಿಬದಿ ವ್ಯಾಪಾರಸ್ಥರಿಗೆ ಬೆಂಬಲ ಉಪಘಟಕದಡಿ ಪುರಸಭಾ ವ್ಯಾಪ್ತಿಯಲ್ಲಿ ೨೦೧೫-೧೬ನೇಸಾಲಿನಲ್ಲಿ ೧೪೧ ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸಿತ್ತು. ಇವರ ಪೈಕಿ ೧೧೮ ಮಂದಿಗೆ ಗುರುತು ಚೀಟಿ ವಿತರಿಸಲಾಗಿತ್ತು. ಈಗ ಸಂಖ್ಯೆ ಜಾಸ್ತಿಯಾಗಿದೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿದರೆ ಟ್ರಾಫಿಕ್ ಜಾಮ್ ಆಗುತ್ತದೆ. ವಾರದ ಸಂತೆ ಅಥವಾ ನಿರ್ದಿಷ್ಟ ಇಂಥದ್ದೇ ಕಡೆ ಎಂಬ ಗುರುತಿಸುವಿಕೆ ಇನ್ನೂ ಆಗಿಲ್ಲ.
ಬಟ್ಟೆ, ತಂಪುಕನ್ನಡಕ, ಈರೋಳ್, ತರಕಾರಿ, ಮೀನು ಸಹಿತ ಬೀದಿ ಬದಿಯಲ್ಲಿ ಬೆಳಗ್ಗೆ ಸಾಮಾನುಗಳನ್ನು ತಂದು ಸಂಜೆವರೆಗೆ ಮಾರಾಟ ಮಾಡಿ, ಅಲ್ಲೇ ಖಾಯಂ ಆಗಿ ನಿಲ್ಲದೆ ಇರುವವರು ಬೀದಿ ಬದಿ ವ್ಯಾಪಾರಿಗಳೆಂದು ಆಡಳಿತ ಗುರುತಿಸಿದೆ. ಬಂಟ್ವಾಳ, ಬಿ.ಸಿ.ರೋಡ್ ಪೇಟೆಯ ಆಯಕಟ್ಟಿನ ಜಾಗಗಳಲ್ಲಿ ವ್ಯಾಪಾರಿಗಳು ಇದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸಿದರೆ ಸಮಸ್ಯೆ ಇಲ್ಲ. ಆದರೆ ನಿಬಿಡ ವಾಹನಗಳು ಓಡಾಡುವ ಜಾಗವನ್ನೇ ಆಯ್ಕೆ ಮಾಡಿ, ವ್ಯಾಪಾರಕ್ಕೆ ತಮ್ಮಲ್ಲಿರುವ ಸಾಮಾನುಗಳನ್ನು ಹರಡಿಕೊಂಡು ಕುಳಿತರೆ, ಸಂಜೆಯೇ ಮನೆಗೆ ಮರಳುತ್ತಾರೆ. ಈ ಸಂದರ್ಭ ಅವರಲ್ಲಿಗೆ ವ್ಯಾಪಾರಕ್ಕೆ ಬರುವವರೂ ವಾಹನ ನಿಲ್ಲಿಸಿ, ಟ್ರಾಫಿಕ್ ಜಾಮ್ಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಸರ್ವೆ ಮಾಡಲಾಗಿದ್ದು, ನಿರ್ದಿಷ್ಟ ಜಾಗ ಗುರುತಿಸಿ ವಲಯವನ್ನಾಗಿ ಗುರುತಿಸಲಾಗುತ್ತದೆ. ಜಾಗ ದೊರಕಿದರೆ, ಅಲ್ಲಿ ಅವರಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಈ ಮೊದಲೇ ಗುರುತಿನ ಚೀಟಿ ಕೊಟ್ಟವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ. ಈ ಕುರಿತು ಸಭೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರ ಸಮಸ್ಯೆಗೆ ಪರಿಹಾರ ದೊರಕಲಿದೆ ಎನ್ನುತ್ತಾರೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್.
Kshetra Samachara
21/01/2021 04:40 pm