ಬೈಂದೂರು: ಬೈಂದೂರು ಒತ್ತಿನೆಣೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವಾಂತರ, ಅಪಘಾತಗಳಿಗೆ ಕಾರಣವಾಗುತ್ತಿದೆ.
ಶಿರೂರು ಕಡೆಯಿಂದ ಬೈಂದೂರು ಮಾರ್ಗವಾಗಿ ಸಾಗುವಾಗ ಎಡಭಾಗದ ರಸ್ತೆ ಸಾಕಷ್ಟು ಎತ್ತರದಲ್ಲಿದೆ. ಇಳಿಜಾರಿನಲ್ಲಿ ಒಮ್ಮೆಲೆ ತಿರುವು ಎದುರಾಗುವುದರಿಂದ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಗೆ ಉರುಳುತ್ತಿದೆ. ಅಲ್ಲದೆ ಇದೇ ಇಳಿಜಾರಿನಲ್ಲಿ ಗುಡ್ಡೆಯ ನೀರು ಹರಿದು ಬರುತ್ತಿರುವುದರಿಂದ ಭಾರಿ ವಾಹನಗಳು ರಸ್ತೆಯ ಮಗ್ಗುಲಲ್ಲಿ ಸಾಲಾಗಿ ನಿಂತು ಚಾಲಕ ಹಾಗೂ ಕ್ಲೀನರ್ ಸ್ನಾನಾದಿ ಕೆಲಸ ಮಾಡಿಕೊಳ್ಳುತ್ತಾರೆ. ಹೀಗಾಗಿ ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಜೇಡಿ ಮಣ್ಣಿನಿಂದಾವೃತವಾದ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಿರುವುದು ಆರಂಭದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಎರಡು ಬಾರಿ ಗುಡ್ಡ ಕುಸಿತ ಉಂಟಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಹೀಗಾಗಿ ಹೆದ್ದಾರಿ ಪ್ರಾಧಿಕಾರ ಅಪಾಯಕಾರಿ ತಿರುವುಗಳನ್ನು ಸರಿಪಡಿಸಿ ರಸ್ತೆ ಪ್ರಯಾಣಿಕರಿಗೆ ಅಪಘಾತ ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
18/01/2021 01:13 pm