ಮಂಗಳೂರು: ಅಧಿಕಾರಿಗಳ, ರಾಜಕಾರಣಿಗಳ ಗಮನಕ್ಕೆ ತರಲು ಪತ್ರಿಕೆಯಲ್ಲಿ ಸುದ್ದಿ ಮಾಡಿದರೂ ಎಚ್ಚೆತ್ತುಕೊಳ್ಳದಿದ್ದಾಗ ಸ್ವತಃ ಪತ್ರಕರ್ತರೇ ರಸ್ತೆಗಿಳಿದು ಸಂಭಾವ್ಯ ಅಪಾಯ ತಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ನಗರದ ಕೆಪಿಟಿ ಬಳಿಯ ಕದ್ರಿ ಪೊಲೀಸ್ ಠಾಣೆ ಎದುರಿನ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇರುವ ರಸ್ತೆ ತಿರುವಿನಲ್ಲಿ ಮೇಲ್ನೋಟಕ್ಕೆ ರಸ್ತೆ ಸರಿಯಾಗಿದ್ದಂತೆಯೇ ಕಂಡರೂ, ಒಳಗಡೆ ಟೊಳ್ಳಾಗಿತ್ತು. ಬದಿಯಲ್ಲಿ ಯಾವ ವಾಹನಗಳು ಸಂಚರಿಸಿದರೂ ಸುಮಾರು 10 ಅಡಿಯ ಕೊಳಚೆ ನೀರು ಹರಿಯುವ ಚರಂಡಿಗೆ ಬೀಳುವುದಂತೂ ಖಚಿತ.
ಇದನ್ನು ಸುದ್ದಿ ಮಾಡಲು ತೆರಳಿದ ವಿಜಯವಾಣಿ ಮಂಗಳೂರು ವರದಿಗಾರ ಹರೀಶ್ ಮೋಟುಕಾನ ಮತ್ತು ಛಾಯಾಚಿತ್ರಗ್ರಾಹಕ ಸಂದೇಶ್ ಜಾರ ಅವರು ಯಾರಿಗೂ ಕಾಯದೆ ದೊಡ್ಡ ಗಾತ್ರದ ಕಲ್ಲುಗಳನ್ನು ತಂದು ವಾಹನಗಳು ರಸ್ತೆಯ ಅಂಚಿಗೆ ಬಾರದಂತೆ ಅಡ್ಡ ಇಟ್ಟಿದ್ದಾರೆ.
ರಾತ್ರಿ ವೇಳೆಯಲ್ಲೂ ಇಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇರುವುದರಿಂದ ಕಲ್ಲುಗಳು ದೂರದಿಂದಲೇ ವಾಹನಗಳು ಬದಿಗೆ ಬಾರದಂತೆ ಎಚ್ಚರಿಕೆ ನೀಡುತ್ತಿವೆ. ಇದೀಗ ಸಂಭಾವ್ಯ ಅಪಾಯ ತಪ್ಪಿಸಿದ ಈ ಇಬ್ಬರು ಪತ್ರಕರ್ತರ ಸಾಮಾಜಿಕ ಬದ್ಧತೆ, ಕಾಳಜಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
11/01/2021 10:06 am