ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳೆದ ಸಸಿಹಿತ್ಲು ಭಾಗದಲ್ಲಿ ಕಳೆದ ಕೆಲವು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಿದ್ದರೂ ಪಂಚಾಯತ್ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಸಸಿಹಿತ್ಲು ಭಾಗದ ಪಂಚಾಯತ್ ಸದಸ್ಯರು ವಿವಸ್ತ್ರರಾಗಿ ಪಂಚಾಯಿತಿಗೆ ಬೀಗ ಜಡಿದು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ಕಳೆದ ಎರಡೂವರೆ ತಿಂಗಳಿನಿಂದ ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಸಸಿಹಿತ್ಲು ಎರಡನೇ ವಾರ್ಡ್‌ನ "ದರ್ಗಾದಿಂದ ಉತ್ತಾನ ಬಳಗದ"ವರೆಗೆ ಕುಡಿಯುವ ನೀರಿನ ಪೂರೈಕೆ ವ್ಯತ್ಯಯ ಉಂಟಾಗಿದ್ದು, ಪಂಚಾಯತ್ ಸದಸ್ಯ ಚಂದ್ರಕುಮಾರ್ ಅನೇಕಬಾರಿ ಪಂಚಾಯತಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ಬುಧವಾರ ಸಂಜೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದರು.
ಆದರೆ ಪಂಚಾಯತ್ ಆಡಳಿತ ನಿರ್ಲಕ್ಷ್ಯ ವಹಿಸಿದ ಕಾರಣ ಸದಸ್ಯರಾದ ಚಂದ್ರಕುಮಾರ್ ಸಹಿತ ಧನರಾಜ ಸಸಿಹಿತ್ಲು, ಅನಿಲ್ ಪೂಜಾರಿ, ಅಬ್ದುಲ್ ಅಜೀಜ್, ಅಬ್ದುಲ್ ಖಾದರ್ ರವರು ಗುರುವಾರ ಬೆಳಗ್ಗೆ ಪಂಚಾಯತಿಗೆ ಬೀಗ ಜಡಿದು ಕೊಡಪಾನ ಇಟ್ಟು ಧಿಕ್ಕಾರ ಕೂಗಿ ವಿನೂತನವಾಗಿ ಪ್ರತಿಭಟಿಸಿ ಧಿಕ್ಕಾರ ಕೂಗಿದ್ದಾರೆ.
ಮುಂದಿನ ದಿನಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡರೆ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಚಂದ್ರಕುಮಾರ್ ಹೇಳಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಹಳೆಯಂಗಡಿ ಗ್ರಾಪಂ ಪಿಡಿಒ ಮುತ್ತಪ್ಪ ರವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಪಂಚಾಯತ್ ಪಿಡಿಓ ಸ್ಪಷ್ಟನೆ ನೀಡಿ ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು ಬಗೆಹರಿಸಲಾಗುವುದು ಎಂದರು.
Kshetra Samachara
16/06/2022 01:20 pm