ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಹುಮಹಡಿ ರಾಯಲ್ ಮಹಲ್ ಕಟ್ಟಡ ಕುಸಿತ; ನಗರಕ್ಕೊಂದು ಎಚ್ಚರಿಕೆ ಕರೆಗಂಟೆ

ಉಡುಪಿ: ನಿನ್ನೆ ಉಡುಪಿ ನಗರ ಹೃದಯಭಾಗದಲ್ಲಿದ್ದ ಬಹುಮಹಡಿಯ ರಾಯಲ್ ಮಹಲ್ ಭಾಗಶಃ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ಈ ಘಟನೆ ನಗರಸಭೆಗೆ ಮತ್ತು ನಗರದ ಹಳೆಯ, ಶಿಥಿಲಗೊಂಡ ಕಟ್ಟಡಗಳ ಮಾಲಕರಿಗೆ ಒಂದು ಎಚ್ಚರಿಕೆ ಕರೆಗಂಟೆಯೂ ಹೌದು.

ಚಿತ್ತರಂಜನ್ ಸರ್ಕಲ್ ನಲ್ಲಿರುವ ರಾಯಲ್ ಮಹಲ್ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಲಾಗಿತ್ತು. ಅಂದರೆ, 1946 ರ ಆಸುಪಾಸಿನಲ್ಲಿ ಈ ಕಟ್ಟಡ ನಿರ್ಮಿಸಲಾಗಿತ್ತು.ಇಷ್ಟೊಂದು ಹಳೆ ಕಟ್ಟಡ ನಗರದಲ್ಲಿದ್ದರೂ ನಗರಸಭೆ ಇನ್ನೂ ಕೆಡವಲು ಏಕೆ ಆದೇಶ ನೀಡಿಲ್ಲ ಎಂಬುದು ನಗರವಾಸಿಗಳ ಪ್ರಶ್ನೆ.

ಕರ್ನಾಟಕ ಪುರಸಭೆ ಅಧಿನಿಯಮ 1964 ನೇ ಸೆಕ್ಷನ್ 230 ರಲ್ಲಿ ವಾಸಕ್ಕೆ ಯೋಗ್ಯವಲ್ಲದ , ಶಿಥಿಲ ಕಟ್ಟಡಗಳನ್ನು ನಗರಸಭೆಗೆ ತೆರವುಗೊಳಿಸಲು ಅವಕಾಶವಿದೆ. ಅಧಿಕಾರಿಗಳು ನೋಟಿಸ್ ನೀಡಿದ ನಿಗದಿತ ದಿನದೊಳಗೆ ಮಾಲಕರು ಕಟ್ಟಡ ತೆರವುಗೊಳಿಸಬೇಕು. ತಪ್ಪಿದರೆ ನಗರಸಭೆ ಅಧಿಕಾರಿಗಳು ಕಟ್ಟಡ ನೆಲಸಮಗೊಳಿಸಿ ಅದರ ಖರ್ಚು ಮತ್ತು ದೊಡ್ಡ ಮಟ್ಟದ ದಂಡವನ್ನು ಮಾಲಕರಿಂದ ವಸೂಲಿ ಮಾಡಲಾಗುತ್ತದೆ ಎಂದು ಉಡುಪಿ ನಗರಸಭೆಯ ಎಇಇ ಮೋಹನ್ ರಾಜ್ ಹೇಳಿದ್ದಾರೆ.

ಆದರೆ, ಇದು ಬರೀ ಹೇಳಿಕೆಯಾಗದೆ ನಗರದಲ್ಲಿರುವ ಇಂತಹ ಶಿಥಿಲಗೊಂಡ ಎಲ್ಲ ಕಟ್ಟಡಗಳನ್ನು ಹುಡುಕಿ, ಕೆಡವಿ ಹಾಕಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.

ನಿನ್ನೆಯ ಘಟನೆಯಲ್ಲಿ ಈ ಕಟ್ಟಡದಲ್ಲಿದ್ದ ಹೊಟೇಲ್ ನ್ಯೂ ದ್ವಾರಕಾದ ಮಹಿಳಾ ಸಿಬ್ಬಂದಿ ಶಬ್ದ ಕೇಳಿ ಹೊರ ಓಡಿ ಬಂದಾಗ ಅವರಿಗೆ ಗಾಯವಾಗಿತ್ತು. ಒಂದು ವೇಳೆ ಈ ಮಹಿಳಾ ಸಿಬ್ಬಂದಿಗೆ ಗೊತ್ತಾಗದೇ ಇರುತ್ತಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು.

ರಾಯಲ್ ಮಹಲ್ ಕಟ್ಟಡದ ಒಂದು ಭಾಗ ಕುಸಿದಿದ್ದು ,ಉಳಿದ ಭಾಗವೂ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಕಟ್ಟಡ ಸಂಪೂರ್ಣ ನೆಲಸಮ ಮಾಡುವಂತೆ ಮಾಲಕ ಸಾಯಿರಾಜ್ ಅವರಿಗೆ ನೋಟಿಸ್ ನೀಡಲಾಗಿದೆ. ನಗರದಲ್ಲಿರುವ ಹಳೆಯ , ಶಿಥಿಲಗೊಂಡ, ನಿರ್ವಹಣೆ ಇಲ್ಲದ ಕಟ್ಟಡಗಳನ್ನು ತೆರವುಗೊಳಿಸಲು ಮಾಲಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಆನಂದ ಸಿ.ಕಲ್ಲೋಳಿಕರ್ ಎಚ್ಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

19/09/2020 04:47 pm

Cinque Terre

14.04 K

Cinque Terre

1