ಉಡುಪಿ: ರಾಜ್ಯಕ್ಕೆ ಸಲ್ಲಬೇಕಾಗಿರುವ ಜಿ.ಎಸ್.ಟಿ ಬಾಕಿ, ನೆರೆ ಪರಿಹಾರ ಬಾಕಿ ಪಾವತಿಗೆ ಆಗ್ರಹಿಸಿ ಮತ್ತು ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ದಾಖಲಾಗಿರುವ ಸುಳ್ಳು ಮೊಕದ್ದಮೆ ವಿರೋಧಿಸಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ಈ ಸಂದರ್ಭ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ಸುಗ್ರಿವಾಜ್ಞೆ, ಅಗತ್ಯ ವಸ್ತು ತಿದ್ದುಪಡಿ ಕಾಯ್ದೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡುವ ಕಾರ್ಮಿಕ ತಿದ್ದುಪಡಿ ಕಾಯ್ದೆ ಸೇರಿದಂತೆ ಎಲ್ಲ ಸುಗ್ರಿವಾಜ್ಞೆ ವಾಪಸು ಪಡೆಯಬೇಕು. ಇವುಗಳನ್ನು ಸಂಸದರು ವಿರೋಧಿಸಿ, ಶಾಸನಗಳನ್ನಾಗಿಸುವ ಪ್ರಯತ್ನ ವಿರೋಧಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಬಾಕಿ, ಬಜೆಟ್ ಅನುದಾನ ಬಾಕಿ, ಬರ ಹಾಗೂ ಅತಿವೃಷ್ಠಿ ಪರಿಹಾರ, ಕೋವಿಡ್ ಪರಿಹಾರದ ಮೊತ್ತ ಕೂಡಲೇ ಬಿಡುಗಡೆ ಮಾಡಬೇಕು. ಕೋವಿಡ್ ಪರಿಹಾರವಾಗಿ ಮುಂದಿನ ಆರು ತಿಂಗಳು ಆದಾಯ ತೆರಿಗೆ ವ್ಯಾಪ್ತಿ ಕೆಳಗೆ ಬರುವ ಕುಟುಂಬಗಳಿಗೆ ತಲಾ ಮಾಸಿಕ 7500 ರೂ. ಹಾಗೂ ತಲಾ ವ್ಯಕ್ತಿಗೆ 10 ಕೆ.ಜಿ. ಪಡಿತರ ನೀಡಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ.ಶಂಕರ್, ಬಲ್ಕೀಸ್ ಕುಂದಾಪುರ, ಜಿಲ್ಲಾ ಸಮಿತಿ ಸದಸ್ಯ ಮಹಾಬಲ ವಡೇರ ಹೋಬಳಿ, ಮುಖಂಡರಾದ ಉಮೇಶ್ ಕುಂದರ್, ಸಂಜೀವ ನಾಯ್ಕ, ನಳಿನಿ, ಸರೋಜ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/09/2020 05:15 pm