ಕಾಪು : ನಮ್ಮ ದೇಶದಲ್ಲಿ ಇತಿಹಾಸಕ್ಕೆ ಕೊರತೆಯಿಲ್ಲ, ಇತಿಹಾಸದ ಬಗೆಗಿನ ದಾಖಲೆಗಳಿಗೂ ಕೊರತೆಯಿಲ್ಲ. ಆದರೆ ಇತಿಹಾಸವನ್ನು ಅರಿತುಕೊಂಡು, ಅದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಯ ಪಡಿಸುವ ಕೆಲಸ ಈವರೆಗೂ ನಡೆದಿಲ್ಲ. ಇದರಿಂದಾಗಿ ಯುವಜನರು ಇತಿಹಾಸದ ಬಗ್ಗೆ ತಿಳಿಯುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಠ ಮಂದಿರಗಳು ಜನರಿಗೆ ಇತಿಹಾಸದ ಗತವೈಭವ ತಿಳಿಪಡಿಸುವ ಪ್ರಯತ್ನ ಮಾಡಬೇಕಿವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.
ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಶ್ವರ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವದ ಹನ್ನೆರಡನೇ ವರ್ಷದ ವರ್ಧಂತ್ಯುತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಆಶೀರ್ವಚನ ನೀಡಿದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಸಮಾಜದ ಜನರಿಗಾಗಿ ಸೇವೆ ಸಲ್ಲಿಸುವುದೇ ಶ್ರೀ ಮಠದ ಉದ್ದೇಶವಾಗಿದೆ.
ಆನೆಗುಂದಿ ಮಠದಿಂದ ಈವರೆಗೆ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿದ್ದು, ಮುಂದೆ ಭೌತಿಕ ಶಿಕ್ಷಣವನ್ನೂ ದೊರಕಿಸಬೇಕೆಂಬ ಸಂಕಲ್ಪದೊಂದಿಗೆ ಸೂರ್ಯ ಚೈತನ್ಯ ಶಾಲೆಯನ್ನು ಖರೀದಿಸಿ, ಆನೆಗುಂದಿ ಮಠದ ಶಾಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಸಂಪ್ರಧಾಯದ ಜೊತೆಗೆ ರಾಷ್ಟ್ರೀಯ ಚಿಂತನೆಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
Kshetra Samachara
26/05/2022 02:43 pm