ವರದಿ: ರಹೀಂ ಉಜಿರೆ
ಉಡುಪಿ: ಆಚಾರ್ಯತ್ರಯರಲ್ಲಿ ಒಬ್ಬರಾದ ದ್ವೈತ ಮತ ಸ್ಥಾಪಕರಾದ ಮಧ್ವಾಚಾರ್ಯರ ಜಯಂತಿಯನ್ನು ಸರಕಾರ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿದೆ. ವಿವಿಧ ಮಹಾಪುರುಷರ ಜಯಂತಿಗಳನ್ನು, ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ಆಚರಿಸಲು ಸರಕಾರ ತೀರ್ಮಾನಿಸಿದೆ. ಆದರೆ ಈ ಮಹಾಪುರುಷರ ಪಟ್ಟಿಯಲ್ಲಿ ಕನ್ನಡದ ಧಾರ್ಮಿಕ ಪುರುಷ ಆಚಾರ್ಯ ಮಧ್ವರ ಹೆಸರಿಲ್ಲ ಎಂದು ಮಾಧ್ವ ಅನುಯಾಯಿಗಳು ಬೇಸರಗೊಂಡಿದ್ದಾರೆ.
ಜಿಲ್ಲೆಗೊಬ್ಬ ಮಹಾಪುರುಷರ ಜಯಂತಿಯನ್ನು ಆಚರಿಸಲು ಸರಕಾರ ನಿಗದಿಪಡಿಸಿದೆ. ಆದರೆ ಈ ಮಹಾಪುರುಷರ ಪಟ್ಟಿಯಲ್ಲಿ ಆಚಾರ್ಯ ಮಧ್ವರ ಹೆಸರಿಲ್ಲ ಎಂದು ಮಾಧ್ವ ತತ್ವ ಅನುಯಾಯಿಗಳು ಬೇಸರಗೊಂಡಿದ್ದಾರೆ. ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕೃಷ್ಣ ಮಠ ಹಾಗೂ ಅಷ್ಟ ಮಠಗಳು ದ್ವೈತಮತದ ಪ್ರಚಾರದಲ್ಲಿ ನಿರತವಾಗಿವೆ. ಈ ಜಗತ್ತಿಗೆ ದ್ವೈತ ಮತವನ್ನು ಪರಿಚಯಿಸಿದ ಆಚಾರ್ಯ ಮಧ್ವರು ಉಡುಪಿ ಜಿಲ್ಲೆಯ ಪಾಜಕದಲ್ಲಿ ಹುಟ್ಟಿದವರು. ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸಿ ಹಿಂದೂ ಧರ್ಮಕ್ಕೆ ಹೊಸ ಕೊಡುಗೆ ಕೊಟ್ಟವರು. ಕೃಷ್ಣ ಮಠವನ್ನು ಸ್ಥಾಪಿಸಿ ಕ್ಷೇತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ತಂದವರು. ಕನ್ನಡದ ನೆಲದಲ್ಲಿ ಹುಟ್ಟಿರುವ ಆಚಾರ್ಯ ಮಧ್ವರ ಹೆಸರನ್ನು ಜಯಂತಿ ಆಚರಿಸುವ ಮಹಾಪುರುಷರ ಪಟ್ಟಿಯಲ್ಲಿ ಕೈಬಿಟ್ಟ ಬಗ್ಗೆ ದ್ವೈತಮತ ಅನುಯಾಯಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೇರಳ ಮೂಲದ ಶಂಕರಾಚಾರ್ಯರ ಜಯಂತಿ ಆಚರಿಸುವ ಉತ್ತಮ ನಿರ್ಧಾರವನ್ನು ಸರಕಾರ ಕೈಗೊಂಡಿರುವಂತೆ ಕರಾವಳಿ ಮೂಲದ ಮಧ್ವಾಚಾರ್ಯರ ಜಯಂತಿಯನ್ನು ಆಚರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಜಯಂತಿಗಳ ಆಚರಣೆಯಿಂದ ಯಾವುದೇ ಮಹಾಪುರುಷರ ಸಾಧನೆಗಳು ನಿರ್ಧಾರವಾಗುವುದಿಲ್ಲ. ಹಾಗಂತ ಕನ್ನಡ ನೆಲದ ಮಹಾಪುರುಷರನ್ನು ಅವಗಣನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕರಾವಳಿಗರು ಕೇಳುತ್ತಿದ್ದಾರೆ.
Kshetra Samachara
14/05/2022 02:13 pm