ಕಾಪು: ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 8 ಕೋಟಿ ರೂ. ವೆಚ್ಚದ `ಬ್ಲೂ ಫ್ಲ್ಯಾಗ್ ಬೀಚ್' ಯೋಜನೆ ಅನುಷ್ಠಾನಿಸಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಶುಕ್ರವಾರ ಪಡುಬಿದ್ರಿ ಬ್ಲೂ ಫ್ಯ್ಲಾಗ್ ಬೀಚ್ ಪ್ರದೇಶದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮತ್ತು ಬ್ಲೂ ಫ್ಯ್ಲಾಗ್ ಬೀಚ್‍ಗಳ ಸಹಕಾರದೊಂದಿಗೆ ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಇಲಾಖೆ ಕಾರ್ಯಕ್ರಮದ ಸಮಾನಾಂತರವಾಗಿ ನಡೆದಿದ್ದ ಐ ಆ್ಯಮ್ ಸೇವಿಂಗ್ ಮೈ ಬೀಚ್ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕೊರೊನಾ ಸಮಸ್ಯೆಯಿಂದ ಸದ್ಯ ಬೀಚ್‍ನ ಸ್ವಚ್ಛತೆ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಯವಾಗಿದ್ದರೂ, ಮುಂದಿನ ತಿಂಗಳಿನಿಂದ ವೇಗ ಪಡೆಯಲಿದೆ. ಆಗಲೇ ಬ್ಲೂ ಫ್ಯ್ಲಾಗ್ ಬೀಚ್‍ನ ಮಾನ್ಯತೆ ದೊರೆತು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಲಾಲಾಜಿ ಮೆಂಡನ್ ಹೇಳಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಹೊನ್ನಾವರ,ಕಾಸರಗೋಡು ಇಕೋ ಬೀಚ್, ಪಡುಬಿದ್ರಿ ಬ್ಲೂ ಫ್ಯ್ಲಾಗ್ ಬೀಚ್ ಸಹಿತ ದೇಶದ ವಿವಿಧ ಬೀಚ್‍ಗಳಲ್ಲಿ ಈ ಕಾರ್ಯಕ್ರಮ ನಡೆದಿದೆ.
ಕೇಂದ್ರ ಸರಕಾರದ ಜ್ಯೂರಿ ಬಳಗ ಪಡುಬಿದ್ರಿ ಬೀಚ್‍ಗೆ ಈಗಾಗಲೇ ವಿಶೇಷ ಪರಿಕಲ್ಪನೆಯ ಸ್ವಚ್ಛ, ಸುಂದರ ಬೀಚ್ ಎಂದು ಪ್ರಶಂಸಿಸಿದೆ. ಮುಂದಿನ ತಿಂಗಳು ಬ್ಲೂ ಫ್ಯ್ಲಾಗ್ ಬೀಚ್ ಮಾನ್ಯತೆಯೂ ಅಂತಾರಾಷ್ಟ್ರೀಯ ಜ್ಯೂರಿ ಪರಿಶೀಲನೆ ಬಳಿಕ ಅಂತಿಮಗೊಳ್ಳಲಿದೆ. ಬಳಿಕ ಬ್ಲ್ಯೂಫ್ಲ್ಯಾಗ್ ಬಗ್ಗೆ 3ನೇ ಧ್ವಜವೂ ಅನಾವರಣಗೊಳ್ಳಲಿದೆ ಎಂದರು.
ಈ ಪ್ರದೇಶದ ಬಳಿ ಸುಮಾರು 2 ಎಕ್ರೆ ಪ್ರದೇಶದ ದ್ವೀಪ ನಿರ್ಮಾಣವಾಗಿದ್ದು ಅದರ ಅಭಿವೃದ್ಧಿ, ಬ್ಲೂ ಫ್ಯ್ಲಾಗ್ ಬೀಚ್‍ಗೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಅನುಕೂಲತೆಗೆ 5 ಕೋಟಿ ರೂ.ನ ಪ್ರಸ್ತಾವನೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮುಂದಿರಿಸಲಾಗಿದೆ.
ಶಾಸಕರ ಹಾಗೂ ಸಂಸದರ ಪತ್ರಗಳ ಸಹಿತ ಈ ಬಗ್ಗೆ ಸರಕಾರದೊಂದಿಗೆ ಸಂವಹನ ನಡೆಸಿ ಅನುದಾನ ಪಡೆದು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಕುಡಿಯುವ ನೀರಿನ ಯೋಜನೆಗೆ ಸ್ಥಳೀಯ ಗ್ರಾಪಂ ನೆರವು ಬಯಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
Kshetra Samachara
18/09/2020 09:46 pm