ಕೊರಗ ಸಮುದಾಯದ ಕುಟುಂಬಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರೂ, ಸ್ಪಂದಿಸಿದ ವ್ಯವಸ್ಥೆಯ ವಿರುದ್ಧ ಜೂ.27ರಂದು ಕೇಪು ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ದ. ಕ. ಜಿಲ್ಲಾ ದಲಿತ್ ಸೇವಾ ಸಮಿಯ ಸ್ಥಾಪಕಾಧ್ಯಕ್ಷ ಬಿ. ಕೆ. ಸೇಸಪ್ಪ ಬೇದ್ರಕಾಡು ಹೇಳಿದರು.
ಅಜ್ಜಿನಡ್ಕ ಕೃಷ್ಣಪ್ಪ ಅವರು ಅಂಗವಿಕಲರಾಗಿದ್ದು, ಹಲವು ಸಮಯದಿಂದ ತನ್ನ ಮನೆ ಸೇರಿ ಅಕ್ಕಪಕ್ಕದ ಮನೆಗಳಿಗೆ ಸೂಕ್ತ ರಸ್ತೆ ನಿರ್ಮಾಣ ಮಾಡಿಕೊಡುವ ಬಗ್ಗೆ ವಿವಿಧ ಕಡೆಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಸರ್ಕಾರಕ್ಕೆ ಇವರ ಮನವಿ ಮುಟ್ಟಿದ ರೀತಿ ಕಾಣುತ್ತಿಲ್ಲ.
ರಸ್ತೆ ನಿರ್ಮಾಣವಾಗುವ ತನಕ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಪ್ರತಿಭಟನೆಯ ಬಗ್ಗೆ ಈಗಾಗಲೇ ಪುತ್ತೂರು ಶಾಸಕರು, ಬಂಟ್ವಾಳ ತಹಶೀಲ್ದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಮತ್ತು ವಿಟ್ಲ ಪೊಲೀಸ್ ಠಾಣೆಗೆ ದೂರು ಪತ್ರವನ್ನೂ ನೀಡಲಾಗಿದೆ. ಕೃಷ್ಣಪ್ಪ ಅವರ ಪ್ರತಿಭಟನೆಗೆ ದ. ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಚಂದ್ರಶೇಖರ ವಿಟ್ಲ, ಸಂಚಾಲಕಿ ವಿಮಲಾ ಸೀಗೆಬಲ್ಲೆ ಉಪಸ್ಥಿತರಿದ್ದರು.
Kshetra Samachara
25/06/2022 03:58 pm