ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಾಮಳೆ- ನೆರೆಯಿಂದ ಒಟ್ಟು ನಷ್ಟ 197 ಕೋಟಿ; ಸರಕಾರ ಕೊಟ್ಟದ್ದು ಬರೀ 15 ಕೋಟಿ!

ವರದಿ: ರಹೀಂ ಉಜಿರೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ಮಳೆಹಾನಿಯಿಂದ ಒಟ್ಟು 197 ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ, ರಾಜ್ಯ ಸರಕಾರ ಆರಂಭಿಕ ಪರಿಹಾರ ಕೊಟ್ಟದ್ದು ಕೇವಲ 15 ಕೋಟಿ ರೂ. ಮಾತ್ರ! ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದ್ದು, ಕೃಷಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ನೆರೆ ಬಂದು ಜಿಲ್ಲೆಯಲ್ಲಿ ಸಾಕಷ್ಟು ಮನೆಗಳು, ಸೇತುವೆಗಳಿಗೆ ಹಾನಿಯಾಗಿದ್ದವು. ರಸ್ತೆಗಳಂತೂ ಸಂಪೂರ್ಣ ಹಾಳಾಗಿವೆ. ವಿವಿಧ ಬೆಳೆಗಳು ಮತ್ತು ಭತ್ತದ ಪೈರು ಮಳೆಗೆ ಕೊಚ್ಚಿಹೋಗಿವೆ. ಮಹಾಮಳೆ ಮಾಡಿರುವ ಅವಾಂತರದ ಮೊತ್ತ 197 ಕೋಟಿ ರೂ. ಎಂಬುದು ಜಿಲ್ಲಾಡಳಿತದ ಅಂದಾಜಾಗಿತ್ತು.

ಆದರೆ, ಸರಕಾರ ಪರಿಹಾರ ರೂಪದಲ್ಲಿ ಕೊಟ್ಟದ್ದು ಕೇವಲ 15 ಕೋಟಿ ರೂ. ಮಾತ್ರ. ಹಿಂದೆಂದೂ ಸುರಿಯದಷ್ಟು ಮಳೆ ಈ ಬಾರಿ ಉಡುಪಿಯಲ್ಲಿ ಕಂಡುಬಂದಿದೆ. ಹಾನಿಯ ಪ್ರಮಾಣವೂ ಅಧಿಕ. ಹೀಗಿದ್ದರೂ ಇಷ್ಟೊಂದು ಕಡಿಮೆ ಮೊತ್ತದ ಪರಿಹಾರ ಎಲ್ಲಿಗೂ ಸಾಕಾಗುವುದಿಲ್ಲ. ಸರಕಾರ ಇನ್ನಷ್ಟು ಪರಿಹಾರ ಬಿಡುಗಡೆ ಮಾಡುವ ಮೂಲಕ ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಕೃಷಿಕ ಪ್ರಮೋದ್ ಕಟಪಾಡಿ ಆಗ್ರಹಿಸಿದ್ದಾರೆ.

ಮಹಾಮಳೆ- ನೆರೆಗೆ 380 ಕ್ಕಿಂತಲೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 933 ಹೆಕ್ಟೇರ್ ಭತ್ತದ ಕೃಷಿ ನಾಶವಾಗಿದ್ದು, ನದಿ- ಸಮುದ್ರದ ಹೊಡೆತಕ್ಕೆ 89 ಸೇತುವೆಗಳಿಗೆ ಹಾನಿಯಾಗಿದೆ. ಮಳೆಯ ರೌದ್ರಾವತಾರಕ್ಕೆ ಉಂಟಾಗಿರುವ ಹಾನಿ ಇಷ್ಟೇ ಅಲ್ಲ, 1428ಕ್ಕೂ ಹೆಚ್ಚು ವಿದ್ಯುತ್ ಕಂಬಗಳು- 256 ಟ್ರಾನ್ಸ್ ಫಾರ್ಮರ್ ಗಳು- 40 ಕಿ.ಮೀ. ಉದ್ದದ ತಂತಿ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ -ಗ್ರಾಮೀಣ ಭಾಗದ 1567 ಕಿಲೋಮೀಟರ್ ರಸ್ತೆ ಹಾಳಾಗಿದ್ದರೆ, 191 ಶಾಲಾ ಕಟ್ಟಡಗಳಿಗೆ ಹಾನಿ ಉಂಟಾಗಿದೆ.

ಇದಲ್ಲದೆ, 55 ನಾಡದೋಣಿಗಳಿಗೆ ಹಾನಿಯಾಗಿ 12 ಕೋಟಿ ರೂ. ನಷ್ಟವಾದರೆ, ಜಿಲ್ಲೆಯಲ್ಲಿ3 ಕಿ.ಮೀ. ವ್ಯಾಪ್ತಿಯಲ್ಲಿ ಕಡಲ್ಕೊರೆತದಿಂದ ನಷ್ಟವಾಗಿದೆ. ಇಷ್ಟೆಲ್ಲ ನಷ್ಟವಾಗಿದ್ದರೂ ಸರಕಾರ ಒಟ್ಟು ನಷ್ಟದ 10 ಶೇ.ದಷ್ಟೂ ಪರಿಹಾರ ನೀಡಿಲ್ಲ. ತಕ್ಷಣ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.

Edited By : Manjunath H D
PublicNext

PublicNext

01/09/2022 06:47 pm

Cinque Terre

42.54 K

Cinque Terre

2

ಸಂಬಂಧಿತ ಸುದ್ದಿ