ಸಸಿಹಿತ್ಲು: ಮಳೆಗಾಲದಲ್ಲಿ ಕಡಲು ಉಗ್ರವಾಗಿರುತ್ತದೆ. ತೆರೆಗಳು ಆಳೆತ್ತರಕ್ಕೆ ಹಾರುತ್ತಾ ವಿಪರೀತ ಸೆಳೆತ ಹಾಗೂ ಅಪಾಯ ಜಾಸ್ತಿ ಇರುತ್ತೆ. ಈ ಸಮಯ ಕಡಲ ತೀರದಲ್ಲಿ ಜೀವರಕ್ಷಕ ಸಾಧನಗಳಿಲ್ಲದೆ ನೀರಿನಲ್ಲಿ ಆಟವಾಡಲು ಇಳಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಈ ನಿಟ್ಟಿನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯಿಂದ ಇರಲು ಮಂಗಳೂರಿನ ಎಲ್ಲಾ ಪ್ರಮುಖ ಬೀಚ್ ಗಳಲ್ಲಿ ದ.ಕ. ಜಿಲ್ಲಾ ಗೃಹರಕ್ಷಕ ಸಿಬ್ಬಂದಿ ಬೀಚ್ ಗಾರ್ಡ್ ಗಳಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರು ಮತ್ತು ಪೌರ ರಕ್ಷಣಾ ದಳದ ಮುಖ್ಯ ಪಾಲಕ ಡಾ.ಮುರಳಿ ಮೋಹನ್ ಚೂಂತಾರು ತಿಳಿಸಿದ್ದಾರೆ.
ಅವರು ಸುರತ್ಕಲ್ ನ ಲೈಟ್ ಹೌಸ್ ಬೀಚ್ ಮತ್ತು ಸಸಿಹಿತ್ಲಿನ ಬೀಚ್ ಗೆ ಭೇಟಿ ನೀಡಿ ಗೃಹರಕ್ಷಕರಿಗೆ ಹೆಚ್ಚಿನ ಮಾಹಿತಿ- ಮಾರ್ಗದರ್ಶನ ನೀಡಿದರು.
ಜಿಲ್ಲಾಧಿಕಾರಿಯವರ ಆದೇಶದಂತೆ ಈ ಬೀಚ್ ಗಾರ್ಡ್ ಗಳು ಬೆಳಿಗ್ಗೆ 7 ರಿಂದ ರಾತ್ರಿ 7 ರ ವರೆಗೆ ನಿರಂತರ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದು, ಪ್ರವಾಸಿಗರನ್ನು ನೀರಿಗೆ ಇಳಿಯದಂತೆ ನೋಡಿಕೊಳ್ಳುತ್ತಾರೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬೀಚ್ ಗಾರ್ಡ್ ಗಳು ಎಲ್ಲಾ ಎಂಟು ಬೀಚ್ ಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭ ಸುರತ್ಕಲ್ ಘಟಕದ ಅಧಿಕಾರಿ ರಮೇಶ್, ಪ್ರವಾಹ ರಕ್ಷಣಾ ತಂಡದ ನಿಖಿಲ್, ದಿವಾಕರ್, ಪ್ರಸಾದ್, ಮಿಥುನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/06/2022 11:28 am