ಕಾಪು: ಕುಂಭದ್ರೋಣ ಮಳೆಯಿಂದಾಗಿ ಹಾನಿಗೊಳಗಾಗಿರುವ ಕಾಪು ದೀಪಸ್ತಂಭ ಸುತ್ತಲಿನ ಪ್ರದೇಶಕ್ಕೆ ಎನ್‍ಡಿಆರ್ ಎಫ್ 10 ಬೆಟಾಲಿಯನ್ ಪಡೆ ಹಾಗೂ ಉಡುಪಿ ಜಿಲ್ಲಾ ಹೋಂ ಗಾರ್ಡ್ ತಂಡ ಭೇಟಿ ನೀಡಿ, ಪರಿಸರದ ಮಳೆ ಹಾನಿ ಪರಿಶೀಲಿಸಿತು.
ಎನ್‍ಡಿಆರ್ ಎಫ್‍ನ ಟೀಮ್ ಕಮಾಂಡರ್ ಗೋಪಾಲ್ ಲಾಲ್ ಮೀನಾ ಮತ್ತು ಅವರ ತಂಡ, ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಉಡುಪಿ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ ಅವರ ತಂಡ ಆಗಮಿಸಿ ಕಾಪು ದೀಪಸ್ತಂಭ ಪರಿಸರ ಹಾನಿಯ ವೀಕ್ಷಣೆ ಮಾಡಿದೆ.
ಈ ಸಂದರ್ಭ ಎನ್‍ಡಿಆರ್ ಎಫ್‍ನ ಟೀಮ್ ಕಮಾಂಡರ್ ಗೋಪಾಲ್ ಲಾಲ್ ಮೀನಾ ಮಾತನಾಡಿ, ಮಳೆ ಮತ್ತು ಪ್ರವಾಹದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಭಾರೀ ಹಾನಿಯುಂಟಾಗಿದೆ. ಕರಾವಳಿ ಪ್ರದೇಶವನ್ನೇ ಹೊಂದಿರುವ ಉಡುಪಿ ಜಿಲ್ಲೆಯುದ್ದಕ್ಕೂ ಚಾಚಿರುವ ಬೀಚ್ ಪ್ರದೇಶದ ಜನರು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕು. ಕಾಪು ಲೈಟ್ ಹೌಸ್ ಪರಿಸರದಲ್ಲಿ ಉಂಟಾಗಿರುವ ಹಾನಿ ಬಗ್ಗೆ ಇಲ್ಲಿಗೆ ಸಂಬಂಧಪಟ್ಟ ಇಲಾಖೆಗಳೇ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಿ ದುರಸ್ತಿಗೆ ಬೇಕಾದ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಜಿಲ್ಲೆಯ ಪೆರಂಪಳ್ಳಿ, ಪಾಸ್‍ಕುದ್ರು, ಕಲ್ಯಾಣಪುರ, ಬ್ರಹ್ಮಾವರ, ಉಪ್ಪೂರು, ಶಿವಳ್ಳಿ, ಆರೂರು, ಹಿರಿಯಡಕ ಮತ್ತು ಕಾಪು ಸೇರಿದಂತೆ ವಿವಿಧೆಡೆ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದ್ದು, 300ಕ್ಕೂ ಅಧಿಕ ಮಂದಿಯನ್ನು ರೆಸ್ಕ್ಯೂ ಮಾಡಲಾಗಿದೆ.
ಪಾಸ್ ಕುದ್ರು, ಆರೂರು ಮತ್ತು ಕಲ್ಯಾಣಪುರ ಪರಿಸರದಲ್ಲಿ ಭಾರೀ ಅಪಾಯದ ಸ್ಥಿತಿ ನಡುವೆಯೂ 70 ಮಂದಿಯನ್ನು ರಕ್ಷಿಸಲಾಗಿದೆ. ಜಾನುವಾರುಗಳನ್ನೂ ರಕ್ಷಿಸಲಾಗಿದ್ದು ನಮ್ಮೊಂದಿಗೆ ಸ್ಥಳೀಯರೂ ಸೇರಿದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಮತ್ತು ಜನಪ್ರತಿನಿಧಿಗಳ ತಂಡ ಸಂಪೂರ್ಣವಾಗಿ ಸಹಕಾರ ನೀಡಿದೆ ಎಂದರು.
Kshetra Samachara
24/09/2020 07:14 pm