ಮುಲ್ಕಿ: ಪಡುಪಣಂಬೂರು ಗ್ರಾಪಂ ನಲ್ಲಿ 'ಸ್ವಾಮಿತ್ವ 'ಯೋಜನೆ (ಆಸ್ತಿ ಸರ್ವೇ ಕಾರ್ಯ) ಬಗ್ಗೆ ವಿಶೇಷ ಗ್ರಾಮ ಸಭೆ ಪಡುಪಣಂಬೂರು ಗ್ರಾ ಪಂ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಭೂಮಾಪನ ಇಲಾಖೆ ಸರ್ವೇಯರ್ ರೂಪಕಲಾ ಮಾತನಾಡಿ, ಸ್ವಾಮಿತ್ವ ಎಂದರೆ ಹೊಸ ತಂತ್ರಜ್ಞಾನದಲ್ಲಿ ಆಸ್ತಿ ಸರ್ವೇ ಕಾರ್ಯ, ಈಗಾಗಲೇ ಮುಲ್ಕಿ ಹೋಬಳಿಯ ಅನೇಕ ಪಂಚಾಯತ್ ಗಳಲ್ಲಿ ಆಸ್ತಿ ಸರ್ವೇ ನಡೆದಿದೆ. ಮೊದಲಿಗೆ ಗ್ರಾಮ ಸಭೆ ಮುಖಾಂತರ ಗ್ರಾಮಸ್ಥರಿಗೆ ಮಾಹಿತಿ ನೀಡಿ ಬಳಿಕ ಆಸ್ತಿ ಸರ್ವೇಗೆ ಗಡಿ ಗುರುತು ಹಾಕಿ ಡ್ರೋನ್ ಮೂಲಕ ಆಸ್ತಿ ಸರ್ವೇ ನಡೆಯುತ್ತದೆ.
ಇದರಿಂದ ಸರಕಾರಿ ಆಸ್ತಿ ಮುಟ್ಟುಗೋಲು ಹಾಕಿದವರನ್ನು ಪತ್ತೆ ಹಚ್ಚಬಹುದು. ಅಲ್ಲದೆ, ಆಸ್ತಿ ತೆರಿಗೆ ಸಂಗ್ರಹಿಸಲು ಅನುಕೂಲ. ಕೃಷಿ ಭೂಮಿ ಸರ್ವೇ ಇಲ್ಲ ಎಂದ ಅವರು, ಕೇವಲ ಮನೆ ಮಾತ್ರ ಸರ್ವೇ ಎಂದು ಹೇಳಿದರು. ಆಗ ಮಾಜಿ ಪಂ. ಸದಸ್ಯ ಉಮೇಶ್ ಪೂಜಾರಿ ಮಾತನಾಡಿ, ಸರ್ವೇಯಿಂದ ಗ್ರಾಮಸ್ಥರು ಆತಂಕಿತರಾಗಿದ್ದು, ಪೂರ್ಣ ಮಾಹಿತಿ ನೀಡಿ. ಗಡಿ ಗುರುತು ಮಾಡಲು ಕೇವಲ ಒಂದೇ ಅಧಿಕಾರಿ ನೇಮಿಸಬೇಕು ಇಲ್ಲದಿದ್ದರೆ ಗೊಂದಲ ಉಂಟಾಗುತ್ತದೆ ಎಂದರು. ಚರ್ಚೆಯಲ್ಲಿ ಗ್ರಾಮಸ್ಥರಾದ ಅಶೋಕ್ ಭಟ್, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ, ಲಕ್ಷ್ಮಣ್ ಕೆರೆಕಾಡು ಮತ್ತಿತರರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಜಿಪಂ ಸದಸ್ಯ ವಿನೋದ್ ಬೊಳ್ಳೂರು ವಹಿಸಿ ಮಾತನಾಡಿ, ಸ್ವಾಮಿತ್ವ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿದ್ದು ಗ್ರಾಮಸ್ಥರು ಬೆಂಬಲ ನೀಡಬೇಕೆಂದು ವಿನಂತಿಸಿ, ಗ್ರಾಮಸ್ಥರಿಗೆ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು. ತಾಪಂ ಸದಸ್ಯ ಜೀವನ್ ಪ್ರಕಾಶ್, ಮುಲ್ಕಿ ಸರ್ವೇಯರ್ ಮಧುಕರ, ಪಿಡಿಒ ಅನಿತಾ, ಕಾರ್ಯದರ್ಶಿ ಲೋಕನಾಥ ಭಂಡಾರಿ, ಪಡುಪಣಂಬೂರು ಪಂ. ಗ್ರಾಮಕರಣಿಕ ಮೋಹನ್ ಉಪಸ್ಥಿತರಿದ್ದರು. ಪಡುಪಣಂಬೂರು ಪಂ. ಕಾರ್ಯದರ್ಶಿ ಲೋಕನಾಥ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು.
Kshetra Samachara
03/10/2020 04:39 pm