ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರೈತ, ಕಾರ್ಮಿಕ ವಿರೋಧಿ ಮಸೂದೆಗಳಿಂದ ದೇಶಕ್ಕೆ ಅಪಾಯ; ಎಸ್ಡಿಪಿಐ

ಮುಲ್ಕಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ರೈತ ಹಾಗೂ ಕಾರ್ಮಿಕ ಮಸೂದೆ ವಿರೋಧಿಸಿ ಮುಲ್ಕಿಯ ಕಾರ್ನಾಡುವಿನಲ್ಲಿ ಮುಲ್ಕಿ ವಲಯ ಎಸ್ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ದ.ಕ. ಜಿಲ್ಲಾ ಎಸ್ಡಿಪಿಐ ಅಧ್ಯಕ್ಷ ಅತಾವುಲ್ಲಾ ಜೋಕಟ್ಟೆ ಮಾತನಾಡಿ, ಕೇಂದ್ರ ಸರಕಾರ ಮೂರು ಅಪಾಯಕಾರಿ ರೈತ ವಿರೋಧಿ ಮಸೂದೆ ಲೋಕಸಭೆಯಲ್ಲಿ ಮಂಡಿಸಿದ್ದು ವಿರೋಧಿಸಿದವರ ವಿರುದ್ದ ದಮನಕಾರಿ ನೀತಿ ಅನುಸರಿಸುತ್ತಿದೆ. ರೈತರ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಆಕ್ರಮಿಸುವ ಹುನ್ನಾರವೂ ಅಡಗಿದೆ. ದೇಶ ಈಗಾಗಲೇ ನೋಟ್ ಅಮಾನ್ಯೀಕರಣ, ಕೊರೊನಾದಿಂದಾಗಿ ತತ್ತರಿಸುತ್ತಿದೆ. ಇದೀಗ ರೈತರ ಸಮಸ್ಯೆ ಬಗೆಹರಿಸುವ ಬದಲಿಗೆ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಮಾಡಲು ಪಣ ತೊಟ್ಟಿದ್ದು ರೈತರನ್ನು ಜೀತದಾಳಾಗಿಸಲು ಹವಣಿಸುತ್ತಿದೆ ಎಂದು ಆರೋಪಿಸಿದರು.

ಮುಲ್ಕಿ ವಲಯ ಎಸ್ಡಿಪಿಐ ಅಧ್ಯಕ್ಷ ಶರೀಫ್ ಕೋಲ್ನಾಡು ಮಾತನಾಡಿ, ಮಸೂದೆ ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದರೂ ಗಣನೆಗೆ ತೆಗೆದುಕೊಳ್ಳದೆ ಮಸೂದೆಯನ್ನು ಕೇಂದ್ರ ಸರಕಾರ ಆಂಗೀಕರಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ರಾಜ್ಯ ಸರಕಾರ ಕೋವಿಡ್ ಭ್ರಷ್ಟಾಚಾರ,ಆಂತರಿಕ ಕಚ್ಚಾಟ, ಆರ್ಥಿಕ ದುಸ್ಥಿತಿ ಎದುರಿಸಲಾಗದೆ ವಿಧಾನಸಭೆ ಅಧಿವೇಶನ ಮೊಟಕುಗೊಳಿಸಿದ್ದು, ರೈತ ವಿರೋಧಿ ಮಸೂದೆ ಬೆಂಬಲಿಸಲು ಅಣಿಯಾಗಿದೆ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಈ ಕಾಯ್ದೆ ಜಾರಿಯಾಗದಂತೆ ತಡೆಹಿಡಿಯಬೇಕೆಂದು ಮನವಿ ಮಾಡಿದರು.

ಮುಲ್ಕಿ ಮೂಡಬಿದ್ರೆ ಎಸ್ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಆಸೀಫ್ ಕೋಟೆ ಬಾಗಿಲು,ಪಿಎಫ್ಐ ಮೂಲ್ಕಿ ವಲಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಮತ್ತಿತರರು ಇದ್ದರು. ಬಳಿಕ ಮುಲ್ಕಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

25/09/2020 08:03 pm

Cinque Terre

13.94 K

Cinque Terre

0