ಸುಳ್ಯ: ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಾಗಿದೆ. ಇದರಿಂದ ತಾಲೂಕಿನ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳು ತಾಳ ತಪ್ಪುತ್ತಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ವಿವಿಧ ಇಲಾಖೆಗಳಲ್ಲಿ 986 ಹುದ್ದೆಗಳಿವೆ.
ಅದರಲ್ಲಿ ಅರ್ಧದಷ್ಟು ಖಾಲಿ ಇದೆ. ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ 9 ಹುದ್ದೆಗಳು ಇರುವಲ್ಲಿ ಎಇಇ ಸೇರಿ 6 ಮಂದಿ ವರ್ಗಾವಣೆಯಾಗಿದ್ದಾರೆ. ಕೇವಲ 3 ಮಂದಿ ಇದ್ದಾರೆ. ತಾಲೂಕು ಪಂಚಾಯತ್ ಸೇರಿ ವಿವಿಧ ಇಲಾಖೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಇದೆ. ಇದರಿಂದ ರಸ್ತೆ, ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸೇರಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ನೇಮಕಾತಿ ಮಾಡದೇ ಇರುವ ಕಾರಣ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ. ಸುಳ್ಯ ತಾಲೂಕಿನ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಅಂಗಾರ ಅವರೂ ಆಸಕ್ತಿ ತೋರುತ್ತಿಲ್ಲ.ಇದರಿಂದ ತಾಲೂಕಿನ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಅ.15ರ ಒಳಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇದ್ದರೆ ಸಾರ್ವಜನಿಕರನ್ನು ಸೇರಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
Kshetra Samachara
28/09/2022 07:47 pm