ಉಡುಪಿ: ನಗರದ ಮಧ್ಯಭಾಗದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಜಾಗ ಸಂಪರ್ಕ ರಸ್ತೆಯನ್ನೇ ಕಾಣದೆ ಮೂರು ದಶಕಗಳಾಗುತ್ತ ಬಂದಿದೆ. ಈ ಭಾಗಕ್ಕೆ ತುರ್ತು ಸೇವೆಗಳು ತಲುಪಲು ಸಾಧ್ಯವೇ ಇಲ್ಲದಂತ ಸ್ಥಿತಿ. ಹಾಗಾದರೆ ಮೂಲಭೂತ ಸೌಕರ್ಯ ವಂಚಿತ ಆ ನಗರ ಪ್ರದೇಶದ ಜನರ ಸಮಸ್ಯೆಗಳಾದರೂ ಏನು? ಒಂದು ವರದಿ ಇಲ್ಲಿದೆ.
ಇದು ಉಡುಪಿ ನಗರಸಭಾ ವ್ಯಾಪ್ತಿಯ ಕಡಿಯಾಳಿ ವಾರ್ಡ್‌ಗೆ ಸಂಬಂಧಪಟ್ಟ ಪಾಡಿಗಾರ್ ಪ್ರದೇಶದ ದೃಶ್ಯ. ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಜಾಗದಲ್ಲಿ ಸುಮಾರು 25ರಷ್ಟು ಕುಟುಂಬಗಳು ಈಗಲೂ ಸಂಪರ್ಕ ರಸ್ತೆಯಿಲ್ಲದೆ ವಾಸಿಸುತ್ತವೆ.
ಈ ಭಾಗದ ನಿವಾಸಿಗಳು ಪಾಡು ಹೇಳತೀರದು. ಶಾಲಾ ಮಕ್ಕಳು ಕಾಲುದಾರಿಯಲ್ಲಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ. ಹಾವುಗಳ ಓಡಾಟ ಇರುವ ಈ ಸ್ಥಳದಲ್ಲಿ ಶಾಲಾ ಮಕ್ಕಳಿಗೆ ಅಪಾಯವೇ ಹಾದಿಯಾಗಿದೆ. ಇನ್ನು ಮಳೆ ಬಂದರೆ ಓಡಾಡೋದೇ ಕಷ್ಟ.
ಹೆರಿಗೆ ಅಥವಾ ವೃದ್ಧರಿಗೆ ಅನಾರೋಗ್ಯ ಆದರೆ ಎತ್ತಿಕೊಂಡೇ ಹೋಗಬೇಕು. ಕೆಲವೇ ದೂರ ಇರುವ ಒಂದಷ್ಟು ಮನೆಗಳು ಖಾಸಗಿ ಜಾಗ ಮಾಡಿಕೊಂಡ ಕಾರಣ ಬೇಲಿ ಹಾಕಿದಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೂ ಕಷ್ಟ. ಹೀಗಾಗಿ ನಗರಸಭೆ ಹಾಗೂ ಶಾಸಕರ ಕಚೇರಿಗೆ ಅಲೆದು ಅಲೆದು ಸುಸ್ತಾದ ನಿವಾಸಿಗಳು ಪಬ್ಲಿಕ್ ನೆಕ್ಸ್ಟ್ ಮೂಲಕ ಸಂಪರ್ಕ ರಸ್ತೆ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರತಿ ಚುನಾವಣೆ ಬಂದಾಗಲೂ ಈ ವಾರ್ಡ್ ನ ನಗರಸಭಾ ಸದಸ್ಯರು ಭರವಸೆ ಕೊಟ್ಟು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ. ಶಾಸಕ ರಘುಪತಿ ಭಟ್ ಇಲ್ಲಿ ರಸ್ತೆ ಸಂಪರ್ಕಕ್ಕೆ ಬಿಡುಗಡೆ ಮಾಡಿರುವ 40 ಲಕ್ಷ ಹಣ ಬಿಡುಗಡೆಯಾಗಿ ಬಹಳಷ್ಟು ವರ್ಷಗಳೇ ಕಳೆದಿವೆ. ಆದರೆ ಸಂಪರ್ಕ ರಸ್ತೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.
21ನೇ ಶತಮಾನದಲ್ಲೂ ನಗರ ಪ್ರದೇಶದಲ್ಲಿ ಇಂತಹದೊಂದು ಪರಿಸ್ಥಿತಿ ಇದೆ ಎಂದರೆ ನಾಗರೀಕ ಸಮಾಜ ನಿಜಕ್ಕೂ ತಲೆತಗ್ಗಿಸಬೇಕು. ಇನ್ನಾದರೂ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕನ್ನು ನೀಡಬೇಕಿದೆ.
ವಿಶೇಷ ವರದಿ: ರಹೀಂ ಉಜಿರೆ
Kshetra Samachara
27/09/2022 06:43 pm