ಕುಂದಾಪುರ: ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ಕಾಲುಸಂಕದಲ್ಲಿ ಕಾಲು ಜಾರಿ ಬಿದ್ದ ಬೋಳಂಬಳ್ಳಿ ಮಕ್ಕಿಮನೆ ನಿವಾಸಿ ಪ್ರದೀಪ್ ಹಾಗೂ ಸುಮಿತ್ರಾ ದಂಪತಿಯ ಮಗಳು ಸನ್ನಿಧಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಎಂದಿನಂತೆ ಸೋಮವಾರ ಬೆಳಿಗ್ಗೆ ಆರಂಭಗೊಂಡಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ವಿಪರೀತ ಮಳೆಯ ಹಿನ್ನಲೆಯಲ್ಲಿ ಸಂಜೆ ಬೇಗ ಮಕ್ಕಳನ್ನು ಮನೆಗೆ ಬಿಟ್ಟಿದ್ದರು. ಅದರಂತೆ ಸನ್ನಿಧಿ ಮನೆಗೆ ಹೊರಟಿದ್ದು, ಆಕೆಯ ಜೊತೆಗೆ ಶಾಲೆಯ ಅಡುಗೆ ಸಹಾಯಕಿಯೂ ಇದ್ದರು ಎನ್ನಲಾಗಿದೆ. ಶಾಲೆಯಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿರುವ ಮರದ ಸೇತುವೆ ಮೇಲೆ ಹೊಳೆ ದಾಟುತ್ತಿದ್ದಾಗ ಆಯತಪ್ಪಿ ಬಾಲಕಿ ಸನ್ನಿಧಿ ಹೊಳೆಗೆ ಬಿದ್ದಾಳೆ ಎನ್ನಲಾಗಿದೆ.
ಸನ್ನಿಧಿಯ ಮನೆಯವರದ್ದು ಕೂಡು ಕುಟುಂಬವಾಗಿದ್ದು ಕುಟುಂಬವಾಗಿದ್ದು, ಆಕೆಯ ದೊಡ್ಡಪ್ಪನ ಮಗಳೂ ಅದೇ ಶಾಲೆಯಲ್ಲಿ ಓದುತ್ತಿದ್ದಳು. ಆದರೆ ಆಕೆ ಸೋಮವಾರ ಶಾಲೆಗೆ ಬರದೇ ಇದ್ದುದರಿಂದ ಸನ್ನಿಧಿ ಮಾತ್ರ ಶಾಲೆಗೆ ಬಂದಿದ್ದಳು.
ಮೂಲಭೂತ ಸೌಲಭ್ಯ ವಂಚಿತ ಪ್ರದೇಶ: ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳಂಬಳ್ಳಿ ಪ್ರದೇಶವೂ ಇನ್ನೂ ಮೂಲಭೂತ ಸೌಕರ್ಯ ವಂಚಿತ ಪ್ರದೇಶವಾಗಿದೆ. ಇಲ್ಲಿ ಸುಮಾರು 50 ಕುಟುಂಬಗಳಿದ್ದು, ಈ ಕುಟುಂಬಗಳು ಇದೇ ಸೇತುವೆಯನ್ನು ಬಳಸುತ್ತಿದ್ದಾರೆ. ಹಲವಾರು ಬಾರಿ ಶಾಸಕರಿಗೆ, ಸಂಸದರಿಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಂದೂರಿಗೆ ಸಾವಿರ ಕೋಟಿ ಅನುದಾನ ಎಲ್ಲಿಗೆ ಹೋಯ್ತು ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಕೈಕೊಟ್ಟ ವಿದ್ಯುತ್: ಸೋಮವಾರ ಸಂಜೆಯಾಗುತ್ತಲೇ ವಿದ್ಯುತ್ ಕೈ ಕೊಟ್ಟಿದೆ. ರಾತ್ರಿ ಎಂಟು ಗಂಟೆಯಾದರೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹಲವಾರು ಬಾರಿ ಮೆಸ್ಕಾಂ ಕಚೇರಿಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಜನ ಆರೋಪಿಸಿದ್ದಾರೆ. ಇದರಿಂದಾಗಿ ಬಾಲಕಿಯ ಶೋಧ ಕಾರ್ಯದಲ್ಲಿ ಹಿನ್ನಡೆಯಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.
ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬೈಂದೂರು ಪೊಲೀಸರು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
PublicNext
08/08/2022 09:28 pm