ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸುರತ್ಕಲ್ ನಿಂದ ತಲಪಾಡಿವರೆಗೆ ಸಂಪೂರ್ಣ ಹೊಂಡಮಯವಾಗಿದ್ದು, ದುರಸ್ತಿಯಾಗಬೇಕಿದೆ ಎಂದು ಮಾಧ್ಯಮಗಳು ಇತ್ತೀಚೆಗೆ ಎನ್ಎಚ್ ಗಮನ ಸೆಳೆದಿತ್ತು. ಆದರೆ, ಎನ್ಎಚ್ ಮಾತ್ರ ತಲೆಕೆಡಿಸಿಕೊಳ್ಳಲೇ ಇಲ್ಲ. ಆದರೆ, ಇದೀಗ ರಾ. ಹೆ. 66ರ ನೇತ್ರಾವತಿ ಸೇತುವೆಯಲ್ಲಿ ಬಿದ್ದ ಹೊಂಡದ ಪರಿಣಾಮ ವಿದ್ಯಾರ್ಥಿಯೋರ್ವಳು ಮೂಳೆ ಮುರಿತಕ್ಕೊಳಗಾಗಿದ್ದಾಳೆ!
ಕೊಣಾಜೆಯ ಮಂಗಳೂರು ವಿವಿ ಎಂಎಸ್ಇ ವಿದ್ಯಾರ್ಥಿನಿ ನಿಶ್ಮಿತಾ ಅವರ ಸ್ಕೂಟಿ ಹೊಂಡಕ್ಕೆ ಬಿದ್ದು, ಕೈಮೂಳೆ ಮುರಿತಕ್ಕೊಳಗಾಗಿದ್ದಾರೆ. ಜುಲೈ 22ರಂದು ಸಂಜೆ 5.30ರ ಸುಮಾರಿಗೆ ಕಾಲೇಜಿನಿಂದ ಮಂಗಳೂರು ನಗರದಲ್ಲಿರುವ ತನ್ನ ಮನೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು.
ಆದರೆ, ನೇತ್ರಾವತಿ ಸೇತುವೆಯಲ್ಲಿ ಬೃಹತ್ ಹೊಂಡವನ್ನು ಗಮನಿಸದೆ ಸ್ಕೂಟಿಯನ್ನು ಹೊಂಡಕ್ಕೆ ಇಳಿಸಿದ್ದಾರೆ. ಇದರಿಂದ ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆಗುರುಳಿದೆ. ನಿಶ್ಮಿತಾ ಎರಡು ಸಲ ಉರುಳಿ ಬಿದ್ದು ಕೈಮೂಳೆ ಮುರಿತಕ್ಕೊಳಗಾಗಿದ್ದಾರೆ. ಅಲ್ಲದೆ ಕಾಲಿಗೂ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಶ್ಮಿತಾಗೆ ಆಗಸ್ಟ್ ನಲ್ಲಿ ಆಂತರಿಕ ಪರೀಕ್ಷೆ, ಯುಜಿಸಿ ನೆಟ್ ಎಕ್ಸಾಂ ಇದ್ದು, ಬಲಗೈ ಮೂಳೆ ಮುರಿತದಿಂದಾಗಿ ಪರೀಕ್ಷೆ ಬರೆಯುವ ಸ್ಥಿತಿಯಲ್ಲಿಲ್ಲ. ತನ್ನ ಈ ಸ್ಥಿತಿಗೆ ಎನ್ಎಚ್ ನೇರ ಹೊಣೆ ಎಂದು ನಿಶ್ಮಿತಾ ಆರೋಪಿಸಿದ್ದಾರೆ. ಜನರಿಂದ ಟೋಲ್ ಪಡೆಯುವ ಎನ್ಎಚ್ ಹೆದ್ದಾರಿ ದುರಸ್ತಿಯನ್ನು ಕಾಲಕಾಲಕ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
26/07/2022 12:55 pm