ಮುಲ್ಕಿ: ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿ ಕೆಂಚನಕೆರೆ ತಿರುವಿನಲ್ಲಿ ಅಪಾಯಕಾರಿ ಹಳೆ ಕಟ್ಟಡ ತೆರವುಗೊಳಿಸಬೇಕೆಂಬ ಸಾರ್ವಜನಿಕರ ಆಗ್ರಹ ಮತ್ತು ಪಬ್ಲಿಕ್ ನೆಕ್ಸ್ಟ್ ವರದಿ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಕಿಲ್ಪಾಡಿ ಪಂ. ಪಿಡಿಒ, ಕಟ್ಟಡ ಮಾಲೀಕರಿಗೆ ಸೂಚನೆ ನೀಡಿ ಅಪಾಯದಲ್ಲಿರುವ ಹಳೆ ಕಟ್ಟಡ ತೆರವುಗೊಳಿಸಿದ್ದಾರೆ.
ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕೆಂಚನಕೆರೆ ತಿರುವಿನಲ್ಲಿ ಅಪಾಯಕಾರಿ ಕಟ್ಟಡ ಕಳೆದ ಕೆಲ ವರ್ಷಗಳಿಂದ ಪಾಳು ಬಿದ್ದಿತ್ತು. ಅಲ್ಲದೆ, ಮುಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ರಾಜ್ಯ ಹೆದ್ದಾರಿಗೆ ತಾಗಿಕೊಂಡೇ ಈ ಕಟ್ಟಡವಿದ್ದು, ತೆರವುಗೊಳಿಸಲು ಕಿಲ್ಪಾಡಿ ಗ್ರಾಪಂ ಪಿಡಿಒ ಕಳೆದ ಒಂದು ವರ್ಷದ ಹಿಂದೆ ಅಂಗಡಿ ಮಾಲೀಕ ಕುಬೆವೂರು ಉದ್ಯಮಿ ಮುರಳಿಧರ ಭಂಡಾರಿ ಅವರಿಗೆ ನೋಟಿಸ್ ನೀಡಿದ್ದರೂ ತೆರವು ಗೊಂಡಿರಲಿಲ್ಲ. ಹಳೆಕಾಲದ ಕಟ್ಟಡದ ಸಮೀಪವೇ ಬೆಳಗ್ಗೆ, ಸಂಜೆ ಹೊತ್ತು ಜನ ಸಂದಣಿ ಮಧ್ಯೆ ಮೀನು ಮಾರಾಟ ನಡೆಯುತ್ತಿದ್ದು, ಮುಲ್ಕಿ ಕಿನ್ನಿಗೋಳಿ ಮೂಡಬಿದ್ರೆ ಕಟೀಲು ರಾಜ್ಯಹೆದ್ದಾರಿ ಅಪಾಯಕಾರಿ ತಿರುವಿನಲ್ಲಿ ಬಹು ಸಂಖ್ಯೆಯ ವಾಹನಗಳು ಓಡಾಡುತ್ತಿದ್ದು, ಅವಘಡ ಸಂಭವಿಸುವ ಮೊದಲೇ ಮುರುಕಲು ಕಟ್ಟಡ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು.
ಸ್ಥಳೀಯರ ಒತ್ತಾಯ ಹಾಗೂ ಪಬ್ಲಿಕ್ ನೆಕ್ಸ್ಟ್ ವರದಿಯಿಂದಾಗಿ ಕೂಡಲೇ ಕಾರ್ಯಪ್ರವೃತ್ತರಾದ ಕಿಲ್ಪಾಡಿ ಪಂ. ಪಿಡಿಒ ಹರಿಶ್ಚಂದ್ರ ಮಂಗಳವಾರವೇ ಕಟ್ಟಡ ಮಾಲೀಕರಿಗೆ ಸೂಚನೆ ನೀಡಿದ್ದು ಕಟ್ಟಡದ ಮಾಲಕರು ಜೆಸಿಬಿ ಮೂಲಕ ಕಟ್ಟಡ ತೆರವುಗೊಳಿಸಿದ್ದು, ಈ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಅಪಾಯಕಾರಿ ಹಳೆ ಕಟ್ಟಡದ ಬಗ್ಗೆ ವರದಿ ಪ್ರಕಟಿಸಿ, ಎಚ್ಚರಿಸಿದ 'ಪಬ್ಲಿಕ್ ನೆಕ್ಸ್ಟ್' ಕೂಡ ಪ್ರಶಂಸೆಗೆ ಪಾತ್ರವಾಗಿದೆ.
Kshetra Samachara
29/09/2020 07:42 pm