ಮುಲ್ಕಿ: ಬಜಪೆ ಬಳಿಯ ಕಂದಾವರ ಗ್ರಾಪಂ ಕೌಡೂರು ಪ್ರದೇಶಕ್ಕೆ ಬುಧವಾರ ಭೇಟಿ ಕೊಟ್ಟ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ . ಭರತ್ ಶೆಟ್ಟಿಯವರು ಸ್ಥಳೀಯರೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ನಂತರ ಈ ಬಗ್ಗೆ ಮಾತನಾಡಿದ ಅವರು, 2016 ರಲ್ಲಿ ಇಲ್ಲಿನ 187 ಜನರಿಗೆ ಹಕ್ಕುಪತ್ರದ ಜೆರಾಕ್ಸ್ ಪ್ರತಿ ಕೊಟ್ಟಿದ್ದು, ಹಕ್ಕುಪತ್ರದ ಮೂಲಪ್ರತಿ ಕೊಟ್ಟಿರಲಿಲ್ಲ. ಅಲ್ಲದೆ, ಇಲ್ಲಿ ತನಕ ಫಲಾನುಭವಿಗಳಿಗೆ ತಮ್ಮ ಜಾಗ ಕೂಡ ತೋರಿಸಿಲ್ಲ. ಕೇವಲ ರಾಜಕೀಯ ಲಾಭ ಪಡೆಯಲು ಅಧಿಕಾರಿಗಳನ್ನು ಬಳಸಿ ಅಧಿಕಾರ ದುರುಪಯೋಗಪಡಿಸಿ ನಕಲು ಪ್ರತಿ ಕೊಟ್ಟು ಜನರನ್ನು ಮೋಸಗೊಳಿಸುವ ಪ್ರಯತ್ನ 2016 ರಲ್ಲಿ ನಡೆದಿದೆ. ಈಗ ನಮ್ಮ ಸರಕಾರ ಬಂದ ಬಳಿಕ ಈ ವಿಷಯ ತಾವು ಗಂಭೀರವಾಗಿ ಪರಿಗಣಿಸಿ ಕೂಲಂಕಷವಾಗಿ ವಿಚಾರಿಸಿದಾಗ ನಕ್ಷೆಯಲ್ಲಿರುವ ನಿವೇಶನಗಳಿಗೂ ಮೂಲಪ್ರತಿಗೂ ತಾಳೆಯಾಗುತ್ತಿಲ್ಲ. ಇದರೊಂದಿಗೆ ಸುತ್ತಮುತ್ತಲಿನ ಜಾಗದ ಮಾಲೀಕರು ಭಾರಿ ಭ್ರಷ್ಟಾಚಾರದ ಆರೋಪಗಳನ್ನು ಕೂಡ ಮಾಡಿದ್ದಾರೆ. ಈ ಬಗ್ಗೆ ಕೂಡ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಸ್ಥಳೀಯರು ಇತರ ಸಮಸ್ಯೆ ಕೂಡ ಗಮನಕ್ಕೆ ತಂದಿದ್ದಾರೆ. ಅಲ್ಲಿ ಮೊದಲ ಹಂತದಲ್ಲಿ ಇಂಜಿನಿಯರ್ ಗಳಿಗೆ ಸರ್ವೆ ಮಾಡಲು ಸೂಚಿಸಿದ್ದು, ಜಾಗ ಸಮತಟ್ಟು ಮಾಡಬೇಕಿದೆ. ರಸ್ತೆ, ಚರಂಡಿ ವ್ಯವಸ್ಥೆ ಮಾಡಬೇಕಿದ್ದು, ಮಳೆಗಾಲದಲ್ಲಿ ಪ್ರದೇಶದಲ್ಲಿ ಭೂಕುಸಿತ ಆಗದಂತೆ ಕ್ರಮ ವಹಿಸಬೇಕಿದೆ. ಇದೆಲ್ಲವನ್ನು ಶೀಘ್ರ ಮಾಡಿ, ನೈಜ ಫಲಾನುಭವಿಗಳಿಗೆ ಮೂಲಹಕ್ಕುಪತ್ರ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತಾಪಂ ಸದಸ್ಯರಾದ ವಿಶ್ವನಾಥ್ ಶೆಟ್ಟಿ, ಅಧಿಕಾರಿಗಳಾದ ಗುರುಪುರ ಉಪತಹಸೀಲ್ದಾರ್ ಶಿವಪ್ರಸಾದ್ , ಯಶವಂತ್ ಬೆಲ್ಚಡ ಪಿಡಿಓ ಕಂದಾವರ, ಯಮನಪ್ಪ ಗ್ರಾಮಕರಣಿಕರು ಕೊಳಂಬೆ, ಮಂಡಲದ ಉಪಾಧ್ಯಕ್ಷರಾದ ಅಮೃತ ಲಾಲ್, ಡಿಸೋಜ, ಮಂಡಲದ ಕಾರ್ಯದರ್ಶಿ ಶೋಧನ್ ಅದ್ಯಪಾಡಿ, ಗುರುಪುರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅಧಿಕಾರಿ, ಕೊಳಂಬೆ ಶಕ್ತಿಕೇಂದ್ರ ಅಧ್ಯಕ್ಷ ಸುಕೇಶ್ ಮಾಣೈ, ಕಂದಾವರ ಶಕ್ತಿಕೇಂದ್ರ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಪಂ. ಸದಸ್ಯ ಉಮೇಶ್ ಮೂಲ್ಯ , ಬೂತ್ ಅಧ್ಯಕ್ಷರುಗಳಾದ ಹರೀಶ್ ನಡಿಕಲ್, ಮಹೇಶ್ ಶೆಟ್ಟಿ ,ಅನಿಲ್ ಭಟ್, ಸುಧಾಕರ್ ಕೊಳಂಬೆ ,ಹರಿಪ್ರಸಾದ್ ಕಜೆ ,ಉದಯ ಬಟ್, ವಾಮನ ಪೂಜಾರಿ ಕೋರಿಪದವು, ಜಗದೀಶ್, ಯಶವಂತ ಕೌಡೂರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.
Kshetra Samachara
01/10/2020 10:19 am