ಪುತ್ತೂರು: 30 ವರ್ಷಗಳಿಂದಲೂ ಶುದ್ಧನೀರನ್ನೇ ಕಾಣದ ಮನೆಗಳು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಪಂ ವ್ಯಾಪ್ತಿಯ ಸಿದ್ಧಮೂಲೆಯಲ್ಲಿದೆ. ಸಿದ್ಧಮೂಲೆ ಮತ್ತು ಕೆಮ್ಮಾರದಲ್ಲಿರುವ 7 ಕುಟುಂಬಗಳು 30 ವರ್ಷಗಳಿಂದ ಕೆರೆಯೊಂದರ ಕಲುಷಿತ ನೀರನ್ನೇ ಬಳಸಿಕೊಂಡು ಜೀವನ ಸಾಗಿಸುತ್ತಿದೆ.
ರಸ್ತೆ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ವಾಹನ ತೊಳೆಯುವುದು, ಬಟ್ಟೆ ಒಗೆಯುವುದು ಸಾಮಾನ್ಯ. ಇದೇ ನೀರನ್ನು ಇಲ್ಲಿನ ಕುಟುಂಬಗಳು ತಮ್ಮ ಎಲ್ಲ ಕಾರ್ಯಗಳಿಗೂ ಬಳಸಬೇಕಾದ ಅನಿವಾರ್ಯತೆ. ತಮಗೆ ನೀರಿನ ಸೌಲಭ್ಯ ಕಲ್ಪಿಸುವಂತೆ ಹತ್ತಾರು ಬಾರಿ ಸ್ಥಳೀಯ ಕೊಳ್ತಿಗೆ ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದರೂ, ಸ್ಪಂದನೆ ಸಿಕ್ಕಿಲ್ಲ. ಎತ್ತರದ ಗುಡ್ಡದ ತುದಿಯಲ್ಲಿ ವಾಸಿಸುತ್ತಿರುವ ಈ ಕುಟುಂಬಗಳು 50 ಅಡಿ ಆಳವಿರುವ ರಸ್ತೆ ಪಕ್ಕದ ಕೆರೆಯಿಂದ ನೀರನ್ನು ಪ್ರತಿನಿತ್ಯವೂ ಸಾಗಿಸಬೇಕಾದ ದುಸ್ಥಿತಿಯಲ್ಲಿದ್ದೇವೆ ಎಂದರು ಸಿದ್ಧಮೂಲೆಯ ಬಬಿತಾ ಮತ್ತು ಉಮಾವತಿ.
7 ಮನೆಗಳಲ್ಲಿ ಯಾವ ಮನೆಯಲ್ಲೂ ಶೌಚಾಲಯ ಇಲ್ಲದ ಕಾರಣ ಮಹಿಳೆಯರು, ಮಕ್ಕಳ ಸಹಿತ ಎಲ್ಲರೂ ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. 20 ವರ್ಷಗಳ ಹಿಂದೆ ನಿರ್ಮಿಸಿರುವ ಮನೆಗಳೂ ಇದೀಗ ಕುಸಿದು ಬೀಳುವ ಸ್ಥಿತಿ ತಲುಪಿದ್ದು, ಆದಷ್ಟು ಬೇಗ ತಮ್ಮ ಸಮಸ್ಯೆಗಳಿಗೆ ಆಡಳಿತ ಮಂದಿ ಸ್ಪಂದಿಸಿ ಎಂದು ಈ ಕುಟುಂಬಗಳು ಅಂಗಲಾಚುತ್ತಿವೆ.
PublicNext
22/01/2022 04:40 pm