84 ವರ್ಷಗಳ ಹಿಂದೆ ಮಳಹಳ್ಳಿ ಶಿವ ರಾಯರು ಸ್ಥಾಪಿಸಿದ ಪುತ್ತೂರು ಪ್ರಾರ್ಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಣ ಹೊಸ ಕಟ್ಟಡ ರೈತ ಭವನದ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 24ರಂದು ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ.ಎಸ್. ಗೌಡ ತಿಳಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬಡ ಕೃಷಿಕರ ಸ್ಥಿತಿ ಶೋಚನೀಯವಾಗಿದ್ದು, ಸ್ಥಿತಿವಂತ ಭೂ ಮಾಲೀಕರ ಕಪಿಮುಷ್ಠಿಯಿಂದ ಹೊರಬರಲು ಸಾಧ್ಯವಾಗದೆ ಬಳಲುತ್ತಿರುವ ಆ ಸಂದಿದ್ದ ಸ್ಥಿತಿಯಲ್ಲಿ ದುರ್ಬಲರ ಬಾಳಿಗೆ ಹೊಸ ಬೆಳಕಾಗಿ ಈ ಸಂಸ್ಥೆಯು ಉದಯಿಸಿತ್ತು. ಪುತ್ತೂರು ಡಿವಿಜನ್ ಸಹಕಾರಿ ಭೂಮಿ ಅಡವಿನ ಬ್ಯಾಂಕ್ ಎಂಬುದಾಗಿ 1938ರಲ್ಲಿ ನೋಂದಣಿಯಾಗಿ ಪ್ರಾರಂಭಗೊಂಡ ಈ ಬ್ಯಾಂಕ್ ಇದೀಗ ಕೃಷಿಕನಿಗೆ ಎಲ್ಲಾ ರೀತಿಯಲ್ಲಿ ಬೆನ್ನೆಲುಬಾಗುವ ಮೂಲಕ ನೆರವಾಗಿದೆ ಎಂದರು.
ಇದೀಗ 84 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ತನ್ನ ಸ್ವಂತ ನೂತನ ಕಟ್ಟಡವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಈ ನೂತನ ಕಟ್ಟಡಕ್ಕೆ 'ರೈತಸೌಧ' ಎಂದು ನಾಮಕರಣ ಮಾಡಲಾಗಿದ್ದು, ಕಟ್ಟಡದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ನೆರವೇರಿಸಲಿದ್ದಾರೆ. ಸಹಕಾರಿ ಸಚಿವ ಎಸ್. ಟಿ., ಸೋಮಶೇಖರ್, ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ .ಎನ್. ರಾಜೇಂದ್ರ ಕುಮಾರ್ ಮೊದಲಾದವರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
21/09/2022 05:24 pm