ಕುಂದಾಪುರ: ಬೈಂದೂರು ತಾಲೂಕು ವ್ಯಾಪ್ತಿಯ ಅತ್ಯಂತ ಕುಗ್ರಾಮಗಳಲ್ಲಿ ಒಂದಾದ ಹಳ್ಳಿಹೊಳೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ವಿವಿಧ ಮೂಲಭೂತ ಸೌಕರ್ಯಗಳನ್ನು ಆದ್ಯತೆಯಲ್ಲಿ ಒದಗಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.
ಅವರು ಇಂದು ಹಳ್ಳಿಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ, ನೆಟ್‌ವರ್ಕ್ ಸಮಸ್ಯೆ, ಕಾಲುಸಂಕದ ರಚನೆ ಇತ್ಯಾದಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಈ ಭಾಗದ ಮುಖ್ಯ ಸಮಸ್ಯೆ ಹಕ್ಕುಪತ್ರವಿಲ್ಲದಿರುವುದು. ಪಹಣಿ ಪತ್ರವಿಲ್ಲದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದೇವೆ ಎಂದು ಸಾರ್ವಜನಿಕರು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವುದರಿಂದ ಈ ಸಮಸ್ಯೆಯಾಗಿದೆ. ಈ ಕುರಿತು ಸರ್ಕಾರದ ಆದೇಶದಂತೆ ಸೂಕ್ತ ಕ್ರಮವಹಿಸಿ, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ, ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
17/09/2022 10:24 pm