ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಭರದಿಂದ ಸಾಗುತ್ತಿದೆ. ಸ್ಮಾರ್ಟ್ ಆಗುತ್ತಿರುವ ರಸ್ತೆಗಳ ಇಕ್ಕೆಲದ ಮರಗಳ ಬುಡಗಳಿಗೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ. ಇದೀಗ ನೂರಾರು ವರ್ಷಗಳಿಂದ ತಲೆಯೆತ್ತಿ ನಿಂತು ನೆರಳಿನ ಆಶ್ರಯವಿತ್ತಿದ್ದ ಮಂಗಳೂರಿನ ಮಾರ್ಗನ್ ಗೇಟ್ ಎಂಫಸಿಸ್ ರಸ್ತೆಯ ಹತ್ತಾರು ಮರಗಳು ಸ್ಮಾರ್ಟ್ ಸಿಟಿ ಅಭಿವೃದ್ಧಿಯಡಿ ಧರೆಗುರುಳಿದೆ!
ಮಾರ್ಗನ್ ಗೇಟ್ ನಿಂದ ಎಂಫಸಿಸ್ ಗೆ ಹೋಗುವ ರಸ್ತೆಯುದ್ದಕ್ಕೂ ಬೃಹದಾಕಾರವಾಗಿ ಬೆಳೆದಿದ್ದ ದೇವದಾರು, ಆಲದ ಮರಗಳನ್ನು ಉರುಳಿಸಲಾಗುತ್ತಿದೆ. ಈಗಾಗಲೇ ಹತ್ತಾರು ಲೋಡ್ ಮರಗಳ ದಿಮ್ಮಿ ಸಾಗಾಟ ಮಾಡಲಾಗಿದೆ. ಇನ್ನೂ ಹಲವು ಮರಗಳು ಅಭಿವೃದ್ಧಿ ಕಾಮಗಾರಿಗೆ ಬಲಿಯಾಗಲಿದೆ.
ಬೆರಳೆಣಿಕೆಯಷ್ಟು ಮರಗಳನ್ನು ಮಾತ್ರ ಕಡಿಯಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಅಂದಾಜು ಪ್ರಕಾರ ಈ ಮರಗಳು ಬ್ರಿಟಿಷ್ ಕಾಲದಲ್ಲಿ ನೆಟ್ಟು ಬೆಳೆಸಲಾಗಿತ್ತು. ಆದ್ದರಿಂದ ಸಾಕಷ್ಟು ವರ್ಷಗಳಿಂದ ಹೆಮ್ಮರವಾಗಿ ಬೆಳೆದು ನಿಂತಿದ್ದ ಮರಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿ ಮಾಡಬಹುದಿತ್ತು. ಆದರೆ, ಈ ಪ್ರಯತ್ನವನ್ನು ಸ್ಮಾರ್ಟ್ ಸಿಟಿ ಮಾಡಿಲ್ಲ.
ಆದರೆ, ಇದೇ ರಸ್ತೆಯಲ್ಲಿ ಏಳೆಂಟು ವರ್ಷಗಳಿಂದ ನೆಟ್ಟು ಬೆಳೆಸಿರುವ ಏಳು ಮರವನ್ನು ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಅವರು ಬೈಕಂಪಾಡಿಯ ಬಗ್ಗುಂಡಿ ಕೆರೆಯ ಬಳಿಯ ಲೇಔಟ್ ಗೆ ಸ್ಥಳಾಂತರಿಸಿದ್ದಾರೆ. ವಿಪರ್ಯಾಸವೆಂದರೆ ಜೀತ್ ಅವರೇ ನೆಟ್ಟಿರುವ ಮರಗಳನ್ನು ಸ್ಥಳಾಂತರ ಮಾಡುವ ಪರಿಸ್ಥಿತಿ ಅವರಿಗೇ ಎದುರಾಗಿದೆ! ಗ್ರೀನ್ ಸಿಟಿ ಮಾಡಲಾಗುತ್ತದೆ ಎಂದು ಹೇಳುತ್ತಲೇ ಅಭಿವೃದ್ಧಿ ನೆಪದಲ್ಲಿ ಹಚ್ಚ ಹಸಿರ ವೃಕ್ಷಗಳನ್ನು ಕೊಂದು ಹಾಕುವ ಪರಿಪಾಠಕ್ಕೆ ಕೊನೆ ಎಂದು?
PublicNext
07/09/2022 05:46 pm