ಕಾಪು: ಮಳೆಗಾಲ ಆರಂಭವಾಗುತ್ತಿದಂತೆ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಿದ್ದು, ಈ ಸಮಸ್ಯೆ ತಕ್ಷಣವೇ ಹೊಗಲಾಡಿಸದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಗ್ರಾಹಕರಿಂದ ವಿದ್ಯುತ್ ಬಿಲ್ಲು ವಸೂಲಿ ಮಾಡುವಲ್ಲಿ ಪಡುಬಿದ್ರಿ ಮೆಸ್ಕಾಂ ಕಛೇರಿ ಎತ್ತಿದ ಕೈ, ಆದರೆ ಗ್ರಾಹಕರಿಗೆ ಪ್ರಾಮಾಣಿಕ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ, ಮಳೆ ಆರಂಭವಾದ ದಿನದಿಂದ ಜನರ ಸಹನೆ ಪರೀಕ್ಷೆ ಮಾಡುವ ರೀತಿಯಲ್ಲಿ ನಿರಂತರ ವಿದ್ಯುತ್ ಕಡಿತ ಮಾಡುತ್ತಿದೆ.
ನಮ್ಮ ಸಮಸ್ಯೆ ಬಗ್ಗೆ ಮೆಸ್ಕಾಂ ಕಛೇರಿಯಲ್ಲಿ ದೂರಿದರೆ ಮಳೆಗಾಳಿ ಮರದ ರೆಂಬೆಗಳು ತಂತಿಗೆ ತಾಗಿಯೋ ಇಲ್ಲ ಬಿದ್ದೋ ವಿದ್ಯುತ್ ಕಡಿತವಾಗುತ್ತಿದೆ ನಾವೇನು ಮಾಡೊಕ್ಕಾಗುತ್ತೆ ಎಂಬುದಾಗಿ ನಮಗೆ ಮರು ಪ್ರಶ್ನೆ ಹಾಕುತ್ತಾರೆ, ಪ್ರತಿ ವಾರದ ಒಂದು ದಿನ ಗುರುವಾರ ಲೈನ್ ನಿರ್ವಹಣೆ ಎಂಬುದಾಗಿ ವಿದ್ಯುತ್ ಕಡಿತಗೊಳಿಸುತ್ತಾರೆ, ಆದರೆ ಏನು ಮಾಡುತ್ತಾರೆ ಗೊತ್ತಿಲ್ಲ ಎಂದರು. ಎಲ್ಲಾ ಭಾಗಗಳಲ್ಲೂ ಮರಗಿಡಗಳು ವಿದ್ಯುತ್ ತಂತಿ ಸಹಿತ ಕಂಬಗಳನ್ನು ಸುತ್ತುವರಿದುರುವುದು ನಮ್ಮ ಗಮನದಲ್ಲಿದೆ. ಮೆಸ್ಕಾಂ ಇಲಾಖೆ ಈ ಬಗ್ಗೆ ಮುಂದಿನ ಹದಿನೈದು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿ ಎಂ.ಹುಸೇನ್, ಮಳೆಗಾಳಿಯ ಸಮಸ್ಯೆಯಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಇದೀಗ ನಮ್ಮ ಕಛೇರಿಗೆ ನಾಲ್ಕುಮಂದಿ ಸಿಬ್ಬಂದಿಗಳ ನೇಮಕವಾಗಿದ್ದು ತಂತಿಯ ಮೇಲಿರುವ ರೆಂಬೆ ಕಡಿಯಲು ಸಹಿತ ಇತರೆ ನಿರ್ವಹಣೆ ಗಾಗಿ ಅವರನ್ನು ನಿಯೋಜನೆ ಮಾಡಲಾಗಿದೆ, ನಾನು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೇವಲ ಒಂದು ತಿಂಗಳು ಆಗಿದೆಯಷ್ಟೇ, ಶೀಘ್ರವಾಗಿ ಸಮಸ್ಯೆ ಪರಿಹಾರ ನಡೆಸಲು ಸಿಬ್ಬಂದಿಗಳೊಂದಿಗೆ ಸೇರಿ ನಾನೂ ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭ ಪ್ರಮುಖರಾದ ಗಣೇಶ್ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ಕರುಣಾಕರ್ ಪೂಜಾರಿ, ನವೀನ್ ಎನ್. ಶೆಟ್ಟಿ, ಮಹೇಂದ್ರ, ಶಫಿ ಕಲಂದರ್, ವಿದ್ಯಾ ಯತೀನ್, ನೀತಾ ಗುರುರಾಜ್, ರಾಜೇಶ್ ಕೋಟ್ಯಾನ್, ಜ್ಯೋತಿ ಮೇನನ್, ರಮೀಜ್ ಹುಸೇನ್, ಉಮಾನಾಥ್ ಮುಂತಾದವರಿದ್ದರು
Kshetra Samachara
14/07/2022 06:03 pm