ಕೋಟ: ಕೋಟ ಗ್ರಾಮಸ್ಥರಿಗೆ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ ಅವರು ಗಾಡಿ ಚಲಾಯಿಸಿ ಕಸ ವಿಲೇವಾರಿಗೆ ಬಂದಿದ್ದು.
ಹೌದು. ಇದು ನಡೆದದ್ದು ಕೋಟ ಗ್ರಾ.ಪಂ ವ್ಯಾಪ್ತಿಯಲ್ಲಿ. ಮಂಗಳವಾರ ಕೋಟ ಗ್ರಾಮ ಪಂಚಾಯತ್ ನ ಎಸ್ ಎಲ್ ಆರ್ ಎಂ ಘಟಕದ ವಾಹನ ಚಾಲಕ ರಜೆ ಹಾಕಿದ್ದ. ಇದರಿಂದ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಸ್ಥಗಿತಗೊಂಡಿತ್ತು. ಜಡಿಮಳೆ ಬೇರೆ. ಕಸ ರಾಶಿಬಿದ್ದರೆ ಕೊಳೆತು ನಾರುವುದಲ್ಲದೆ, ಆರೋಗ್ಯ ಸಮಸ್ಯೆಯೂ ಖಂಡಿತ. ಏನು ಮಾಡುವುದೆಂದು ತೋಚದೆ ಘಟಕ ಮುಖ್ಯಸ್ಥರು ಚಿಂತಾಕ್ರಾಂತರಾಗಿದ್ದರು. ಇದು ಗಮನಕ್ಕೆ ಬಂದದ್ದೇ ತಡ, ಸ್ವತಃ ಪಂಚಾಯತ್ ಅಧ್ಯಕ್ಷರೇ ಕಸ ಸಂಗ್ರಹ ವಾಹನವೇರಿ ತಾವೇ ವಾಹನ ಚಲಾಯಿಸಿಕೊಂಡು ಇಡೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ ಕಸ ವಿಲೇವಾರಿಯಲ್ಲಿ ಸಹಕರಿಸಿದರು.
ಮಳೆ, ಗಾಳಿ, ತ್ಯಾಜ್ಯದ ದುರ್ನಾತವನ್ನೂ ಲೆಕ್ಕಿಸದೆ ಓರ್ವ ಸಾಮಾನ್ಯನಂತೆ ಕಾರ್ಯಾಚರಿಸಿದ ಈ ಪ್ರಥಮ ಪ್ರಜೆಯ ಕಾರ್ಯವೈಖರಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. ಕಸ ತುಂಬಿರುವ ವಾಹನವನ್ನು ಅವರು ಚಲಾಯಿಸುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಮೆಚ್ಚುಗೆಯ ಮಹಾಪೂರವೇ ಬಂದಿದೆ.
Kshetra Samachara
13/07/2022 10:28 pm