ವಿಟ್ಲ: ತನ್ನ ಕೃಷಿಭೂಮಿ ಹಾಗೂ ಬಾವಿಗೆ ರಸ್ತೆ ನೀರು ಹರಿದು ಹಾನಿಯಾಗುತ್ತಿದೆ ಎಂದು ಆರೋಪಿಸಿ ಕೃಷಿಕರೊಬ್ಬರು ಸಂಬಂಧಿಕರೊಂದಿಗೆ ವಿಟ್ಲಮುಡ್ನೂರು ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದಾಗ ಪಿಡಿಒ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಪ್ರತಿಭಟನಾಕಾರರನ್ನು ಹಿಂದಕ್ಕೆ ಕಳುಹಿಸಿದ ಘಟನೆ ನಡೆಯಿತು.
ವಿಟ್ಲಮುಡ್ನೂರು ಗ್ರಾಮದ ದಡ್ಡಲ್ತಡ್ಕದ ಅಂಗನವಾಡಿಗೆ ಕಾಂಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಮಳೆನೀರು ರಸ್ತೆಯಲ್ಲಿ ಹರಿದು ನಮ್ಮ ಕೃಷಿಭೂಮಿ ಹಾಗೂ ಬಾವಿಗೆ ಸೇರುತ್ತಿದೆ. ಈ ಬಗ್ಗೆ ನಾನು ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿಭಟನೆ ಅನಿವಾರ್ಯವಾಯಿತು ಎಂದು ದಿ.ಬಟ್ಯ ನಾಯ್ಕ್ ಅವರ ಪುತ್ರ ಕೆ.ರಘು ನಾಯ್ಕ್ ತಿಳಿಸಿದ್ದಾರೆ.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಸ್ಥಳಕ್ಕೆ ಆಗಮಿಸಿದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕ್ಕಾಡು ಮಾತನಾಡಿ, ಪಿಡಿಒ ರಾಘವೇಂದ್ರ ನಮ್ಮೊಂದಿಗೆ ಮಾತುಕತೆ ನಡೆಸಿ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಿಟ್ಟಿನಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ ರಾಘವೇಂದ್ರ ಹೊರಪೇಟೆ, 4 ದಿನಗಳ ಹಿಂದೆ ಗ್ರಾಪಂಗೆ ದೂರು ನೀಡಿದ ನಂತರ ನಾನು ಹಾಗೂ ಸದಸ್ಯರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ನೀರು ಹರಿದು ಹೋಗುವ ವ್ಯವಸ್ಥೆಗೆ ಮೂರ್ನಾಲ್ಕು ಮನೆಯವರ ವಿರೋಧವಿದೆ. ನಾವು ಸಾರ್ವಜನಿಕರ ಹೇಳಿಕೆ ಪಡೆದು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ.
70% ನೀರು ತಡೆಯುವ ಕಾರ್ಯ ಕೂಡಲೇ ಮಾಡಿ ಕೊಡುತ್ತೇನೆ. ಉಳಿದ 30% ಕೆಲಸವನ್ನು ಕ್ರಿಯಾ ಯೋಜನೆ ಮೂಲಕ ಮಾಡುತ್ತೇವೆ ಎಂದರು.
Kshetra Samachara
12/07/2022 06:59 pm