ಮಂಗಳೂರು: "ಎಷ್ಟು ಬಾರಿ ಹೇಳಿದರೂ ಈ ಜನಗಳು ಏನೂ ಮಾಡೋಲ್ಲ" ಎಂದು ರಸ್ತೆಯಲ್ಲಿ ಮ್ಯಾನ್ ಹೋಲ್ ನಿಂದ ನೀರು ಉಕ್ಕಿ ಹರಿಯುವುದನ್ನು ಕಂಡು ಹಿಂದಿ ಭಾಷೆಯಲ್ಲಿ ಮಾತನಾಡುವ ಈ ವೀಡಿಯೋ ಎಲ್ಲಿಯೋ ಉತ್ತರ ಭಾರತದ ದೃಶ್ಯವಲ್ಲ. ಇಲ್ಲೇ ಮಂಗಳೂರಿನ ಮಂಗಳಾದೇವಿ ಸಮೀಪದ ಅರೆಕೆರೆ ಬೈಲು ಪ್ರದೇಶದ ದೃಶ್ಯ.
ಅರೆಕೆರೆ ಬೈಲು ಪ್ರದೇಶದಲ್ಲಿ ಸಾಕಷ್ಟು ಮನೆಗಳಿವೆ. ಬಹಳಷ್ಟು ವರ್ಷಗಳಿಂದ ಇಲ್ಲಿಯ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಆದರೆ ಜನಪ್ರತಿನಿಧಿಗಳು ಇದನ್ನು ಕಂಡರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದೀಗ ಮ್ಯಾನ್ ಹೋಲ್‌ನಿಂದ ತೂರಿ ಬರುವ ನೀರಿನಲ್ಲಿಯೇ ನಡೆದಾಡುವ ಸ್ಥಳೀಯರು ತಮ್ಮ ದುರವಸ್ಥೆಗೆ ಹಲುಬಿ ಅದನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.
ಈ ವೀಡಿಯೋ ಮಾಡಿರುವ ಸ್ಥಳೀಯ ನಿವಾಸಿಯೊಬ್ಬರು ಮೊದಲು ತುಳು ಭಾಷೆಯಲ್ಲಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅದೇ ದಾರಿಯಲ್ಲಿ ಬರುತ್ತಿರುವ ಉತ್ತರ ಭಾರತ ಮೂಲದ 3-4 ಮಂದಿ ಕಾರ್ಮಿಕರಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿ "ಎಷ್ಟು ಬಾರಿ ಹೇಳೋದು... ಹೇಳಿ ಹೇಳಿ ಸಾಕಾಯ್ತು, ಅತ್ತ ಕಡೆಯಿಂದ ಹೋಗಬೇಡಿ, ಈಚೆಯಿಂದ ಹೋಗಿ" ಎಂಬ ಮಾತು ವೀಡಿಯೋದಲ್ಲಿ ಕೇಳುತ್ತದೆ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಈ ಊರಿನ ಜನತೆಯ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕಾಗಿದೆ.
Kshetra Samachara
30/06/2022 03:20 pm