ಮಂಗಳೂರು: ಮಂಗಳಾದೇವಿ ಬಳಿಯ ಗುಜ್ಜರಕೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಹೊಂದಿದ್ದರೂ ಬ್ಯಾಕ್ಟೀರಿಯಾ ಅಂಶಗಳಿರುವ ನೀರಿನ ಶುದ್ಧೀಕರಣವಾಗದೆ ಬಳಕೆಗೆ ಅಯೋಗ್ಯವಾಗಿತ್ತು. ಅಲ್ಲದೆ, ಪರಿಸರದ ಬಫರ್ ಝೋನ್ ವಲಯ, ಒತ್ತುವರಿ ತೆರವು ಮಾಡುವಂತೆ ಜನಪ್ರತಿನಿಧಿಗಳ ಬಳಿ ಎಡತಾಕಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನಿ ಮೋದಿ ಕಚೇರಿಗೆ ಪತ್ರ ಬರೆದು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿತ್ತು. ಇದೀಗ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸ್ಪಂದನೆ ದೊರಕಿದೆ.
ಹೌದು... ಸಾವಿರಾರು ವರ್ಷಗಳ ಐತಿಹ್ಯವಿರುವ ಗುಜ್ಜರಕೆರೆ ಅಭಿವೃದ್ಧಿ, ಸಮಸ್ಯೆ ಪರಿಹಾರಕ್ಕೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಸಾಕಷ್ಟು ಹೋರಾಟ ನಡೆಸಿತ್ತು. ಈ ಫಲವಾಗಿ 3.43 ಎಕರೆ ವಿಸ್ತೀರ್ಣದ ಕೆರೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಂಡಿತ್ತು. ಆದರೆ, ಕೆರೆಯ ರಕ್ಷಣಾ ಕಾರ್ಯ ಮಾತ್ರ ಕಡೆಗಣನೆಯಾಗಿತ್ತು. ಆದ್ದರಿಂದ ತೀರ್ಥ ಸಂರಕ್ಷಣಾ ವೇದಿಕೆ, ಪಿಎಂ ಕಚೇರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಪತ್ರ ಬರೆದಿತ್ತು. ಇದೀಗ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ದ.ಕ.ಜಿಲ್ಲಾಧಿಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಕ್ಷಣ ಗುಜ್ಜರಕೆರೆ ತೊಂದರೆ ಬಗ್ಗೆ ಪರಿಶೀಲಿಸುವಂತೆ ಈ-ಮೇಲ್ ರವಾನೆಯಾಗಿದೆ.
ಯು.ಪಿ. ಸಿಎಂ ಯೋಗಿ ಆದಿತ್ಯನಾಥ್ ಪೀಠಾಧಿಪತಿಯಾಗಿದ್ದ ಉತ್ತರದ ಗೋರಖಪುರ ಮಠದ ಮೂಲಗುರು ಮತ್ಸ್ಯೇಂದ್ರನಾಥರಿಗೆ ಸ್ನಾನ ಮಾಡಲೆಂದು ಯೋಗಿ ಗೋರಕ್ಷನಾಥರಿಂದ ಈ ಕೆರೆ ನಿರ್ಮಾಣಗೊಂಡಿದೆ ಎಂಬ ಐತಿಹ್ಯವಿದೆ. ಆದ್ದರಿಂದ ಶೀಘ್ರ ಯೋಗಿ ಆದಿತ್ಯನಾಥ್ ರಿಗೂ ಈ ಕೆರೆ ಅವ್ಯವಸ್ಥೆ ಬಗ್ಗೆ ಪತ್ರ ಬರೆಯಲು ತೀರ್ಥ ಸಂರಕ್ಷಣಾ ವೇದಿಕೆ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಈ ಹೋರಾಟಕ್ಕೆ ಜನಪ್ರತಿನಿಧಿಗಳಿಂದ, ಸರಕಾರದಿಂದ, ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯಲೆಂಬುದೇ ʼಪಬ್ಲಿಕ್ ನೆಕ್ಸ್ಟ್ʼ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
Kshetra Samachara
26/06/2022 03:17 pm