ಉಡುಪಿ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಇಂದು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆಯ ವಿದ್ಯುದ್ದೀಕರಣ ಯೋಜನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಕಾರ್ಯಕ್ರಮವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಸಚಿವೆ ,ಕೊಂಕಣ ರೈಲ್ವೆಯು ಕರಾವಳಿಯ ಜೀವನಾಡಿಯಾಗಿದ್ದು, ಕರಾವಳಿಯನ್ನು ಉತ್ತರ ಭಾರತದೊಂದಿಗೆ ಜೋಡಿಸುವ ಮಾರ್ಗವಾಗಿದೆ. ಪರಿಸರದ ಹಲವು ಅಡೆತಡೆಗಳನ್ನು ಎದುರಿಸಿ ಆರಂಭಗೊಂಡ ಈ ರೈಲ್ವೆ ಮಾರ್ಗವನ್ನು ಪ್ರಸ್ತುತ ವಿದ್ಯುದ್ದೀಕರಣಗೊಳಿಸಿರುವುದರಿಂದ ವಾರ್ಷಿಕ 300 ಕೋಟಿ ರೂ. ಉಳಿತಾಯವಾಗಲಿದೆ ಎಂದರು.
ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರುವರೆಗಿನ 740 ಕಿ.ಮೀ ಉದ್ದದ ಕೊಂಕಣ ರೈಲು ಮಾರ್ಗವನ್ನು 1287 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣಗೊಳಿಸಿದ್ದು, ಇದರಿಂದ ವಾರ್ಷಿಕ ಇಂಧನ ವೆಚ್ಚ 180 ಕೋಟಿ ರೂ. ಹಾಗೂ ನಿರ್ವಹಣಾ ವೆಚ್ಚ 120 ಕೋಟಿ ರೂ. ಗಳ ಉಳಿತಾಯವಾಗಲಿದೆ. ವಿದ್ಯುತ್ ಬಳಕೆಯಿಂದ ಕಲ್ಲಿದ್ದಲಿನ ಬಳಕೆ ಪ್ರಮಾಣ ಕಡಿಮೆಯಾಗಿ, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಹಾಗೂ ಪ್ರಯಾಣಿಕರಿಗೆ ವೇಗವಾಗಿ ತಮ್ಮ ಸ್ಥಳಗಳಿಗೆ ತಲುಪಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 16 ಮೈಲ್ ಎಕ್ಸ್ಪ್ರೆಸ್ ಹಾಗೂ 10 ಗೂಡ್ಸ್ ರೈಲುಗಳು ಸಂಚರಿಸಲಿವೆ. ದೇಶದಲ್ಲಿ 2024 ರೊಳಗೆ 67956 ಕಿ.ಮೀ. ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಯೋಜನೆಯಿದೆ ಎಂದರು.
Kshetra Samachara
20/06/2022 08:46 pm