ಉಳ್ಳಾಲ: ಮುನ್ನೂರು ಗ್ರಾಮದ ಭಂಡಾರ ಬೈಲು ಎಂಬಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯದ ರಾಶಿ ಸುರಿಯುತ್ತಿದ್ದು,ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಗ್ರಾ.ಪಂ ಅಧ್ಯಕ್ಷರನ್ನ ಗ್ರಾಮಸ್ಥರು ತರಾಟೆಗೆ ತೆಗೆದ ಘಟನೆ ನಡೆದಿದೆ.
ಭಂಡಾರ ಬೈಲಿನ ರಸ್ತೆ ಅಂಚಲ್ಲೇ ಭಾರೀ ಪ್ರಮಾಣದಲ್ಲಿ ಗಬ್ಬು ತ್ಯಾಜ್ಯವನ್ನ ಸುರಿಯಲಾಗುತ್ತಿದೆ.ಹತ್ತಿರದಲ್ಲೇ ಮುನ್ನೂರು ಗ್ರಾಮ ಪಂಚಾಯತ್ನ ತ್ಯಾಜ್ಯ ವಿಲೇವಾರಿ ಘಟಕವಿದ್ದರೂ ಅದು ನಾದುರಸ್ಥಿಯಲ್ಲಿದ್ದು ನಿಷ್ಕ್ರಿಯವಾಗಿದೆ.
ಗುರುವಾರದಂದು ನೆರೆಯ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವನ್ನು ಪಿಕ್ ಅಪ್ ವಾಹನದಲ್ಲಿ ತಂದು ಸುರಿದ ವೇಳೆ ಗ್ರಾಮಸ್ಥರು ವಾಹನ ಚಾಲಕನಿಗೆ ಘೇರಾವ್ ಹಾಕಿದ್ದಾರೆ.ಆದರೆ ಚಾಲಕನು ಮುನ್ನೂರು ಪಂಚಾಯತ್ನ ಅನುಮತಿ ಮೇರೆಗೆ ಕಸ ತಂದು ಸುರಿದಿರುವುದಾಗಿ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಕೆರಳಿದ ಗ್ರಾಮಸ್ಥರು ಗ್ರಾ.ಪಂ ಕಛೇರಿಗೆ ತೆರಳಿ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಅವರನ್ನೇ ತರಾಟೆಗೆ ತೆಗೆದಿದ್ದಾರೆ.ಗ್ರಾಮಸ್ಥರನ್ನ ಉದ್ದೇಶಿಸಿ ಮಾತನಾಡಿದ ವಿಲ್ಫ್ರೆಡ್ ಅವರು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವ ವಿಚಾರ ತನ್ನ ಗಮನಕ್ಕೆ ಬಂದಿಲ್ಲ.ರಸ್ತೆ ಬದಿ ರಾಶಿ ಬಿದ್ದಿರುವ ತ್ಯಾಜ್ಯವನ್ನ ಶೀಘ್ರ ವಿಲೇವಾರಿ ಮಾಡುತ್ತೇವೆ.ಯಾರು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿದ್ದಾರೋ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಮಜಾಯಿಷಿ ನೀಡಿದರು.
ಮಂಗಳೂರಿನ ವಿಲೇವಾರಿ ಘಟಕಕ್ಕೆ ತ್ಯಾಜ್ಯ ರವಾಣಿಸಲು ತಾಂತ್ರಿಕವಾಗಿ ಅಡಚಣೆ ಉಂಟಾಗಿದೆ.ಶಾಸಕ ಯು.ಟಿ ಖಾದರ್ ಅವರ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಸರಿಹೋಗಲಿದ್ದು ಮತ್ತೆ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡಲಿದ್ದೇವೆ.ಗ್ರಾಮಕ್ಕೆ ತ್ಯಾಜ್ಯ ವಿಲೇವಾರಿಗೆಂದೆ ಈಗಾಗಲೇ ಭಂಡಾರ ಬೈಲು ಪರಿಸರದಲ್ಲೇ ಒಂದು ಎಕರೆ ಜಮೀನು ಮಂಜೂರಾಗಿದ್ದು ವಿಲೇವಾರಿ ಘಟಕ ಶೀಘ್ರವೇ ಆರಂಭಗೊಳ್ಳಲಿದ್ದು ನಂತರ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ವಿಲ್ಫ್ರೆಡ್ ಡಿ ಸೋಜ ಹೇಳಿದ್ದಾರೆ.
Kshetra Samachara
16/06/2022 05:15 pm