ಸುಳ್ಯ: ಸುಳ್ಯ ಕ್ಷೇತ್ರದ ವಿವಿಧ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರದಿಂದ 50 ಕೋಟಿ ರೂ ಅನುದಾನ ಮಂಜೂರುಗೊಂಡಿದೆ. ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ದುಸ್ತರವಾದ ರಸ್ತೆಗಳ ತಾತ್ಕಾಲಿಕ ದುರಸ್ತಿಗೆ ಸೂಚನೆ ನೀಡಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಡುಗಡೆಯಾದ ಅನುದಾನದಲ್ಲಿ ಕ್ಷೇತ್ರದ ಪ್ರಮುಖ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಮಾಡಲಾಗುವುದು. ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಪಂಚಾಯತ್ ಸೇರಿ ಎಲ್ಲಾ ವಿಭಾಗದ ಇಂಜಿನಿಯರ್‌ಗಳ ಸಭೆ ನಡೆಸಲಾಗಿದ್ದು ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆಗಳ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಒಳಚರಂಡಿ ಕುಸಿದು ಸುಳ್ಯ ನಗರದಲ್ಲಿ ರಸ್ತೆಯಲ್ಲಿ ಸಮಸ್ಯೆ ಆಗಿರುವುದನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗೆ ನಿರ್ಮಾಣ ಮಾಡುವ ಜಾಕ್‌ವೆಲ್ ಕಾಮಗಾರಿ ಆದಷ್ಟು ಬೇಗ ಪೂರ್ತಿ ಮಾಡಲು ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 17 ಕೋಟಿ ಅನುದಾನ ಮಂಜೂರಾಗಿದೆ. ಹೊಸ ಶುದ್ಧೀಕರಣ ಘಟಕ ಸೇರಿದಂತೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಸುಳ್ಯಕ್ಕೆ 110 ಕೆ.ವಿ.ಸಬ್‌ಸ್ಟೇಷನ್ ನಿರ್ಮಾಣದ ಕುರಿತು ಎರಡು ಬಾರಿ ಇಂಧನ ಸಚಿವರ ಜೊತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆ, ಗೇರು ನಿಗಮದ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದರು. ಸುಳ್ಯದ ತ್ಯಾಜ್ಯ ವಿಲೇವಾರಿಗೆ ಕಲ್ಚರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಿ ಪ್ರಾಯೋಗಿಕ ಚಾಲನೆ ಮಾಡಲಾಗಿದೆ. ನಗರ ಪಂಚಾಯತ್ ಮುಂಭಾಗದ ಕಸ ಸಾಗಾಟಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತಿದೆ ಎಂದು ಸಚಿವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.
Kshetra Samachara
23/05/2022 11:25 am