ಕಡಬ: ಅಕ್ರಮ ಸಕ್ರಮ, ೯೪ ಸಿ ಅರ್ಜಿಗಳು ಇನ್ನುಮುಂದೆ ಕಡ್ಡಾಯವಾಗಿ ಗ್ರಾಮ ಪಂಚಾಯತಿಗಳ ಪರಿಶೀಲನೆಗೆ ಒಳಪಟ್ಟು ಗ್ರಾ.ಪಂ ಹಂತದಲ್ಲೇ
ಅರ್ಜಿಗಳು ಮಂಜೂರಾತಿಗೆ ಯೋಗ್ಯವಾಗಿವೆಯೇ ಎಂದು ನಿರ್ಧಾವಾಗಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಕಡಬದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಕಡತ ವಿಲೆವಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮಕರಣಿಕರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಗ್ರಾಮದ ಅರ್ಧ ಸಮಸ್ಯೆ ಪರಿಹರವಾಗುತ್ತದೆ. ಗ್ರಾಮ ಪಂಚಾಯಿತಿಗೆ ಗ್ರಾಮದಲ್ಲಿನ ಸರಕಾರಿ ಜಾಗಗಳ ಸಂಪೂರ್ಣ ಮಾಹಿತಿ ಇರಬೇಕು ಹಾಗೂ ಅದರ ರಕ್ಷಣೆ ಪಂಚಾಯಿತಿಯದ್ದಗಿರುತ್ತದೆ. ಅದೇ ರೀತಿ ೯೪ ಸಿ ಹಾಗೂ ಅಕ್ರಮ ಸಕ್ರಮ ಅರ್ಜಿಗಳು ಗ್ರಾಮ ಪಂಚಾಯಿತಿಗಳ ಅವಗಾನೆಗೆ ಬಂದು ಕಡತಗಳು ಮತ್ತೆ ಮುಂದುವರಿಯಬೇಕು. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಮಾಹಿತಿಯ ಪಟ್ಟಿ ಗ್ರಾಮ ಪಂಚಾಯಿತಿ ಬಳಿ ಇರಬೇಕು. ಹಾಗೆ ಬಂದ ಅರ್ಜಿಗಳು ಮಂಜೂರಾತಿಗೆ ಯೋಗ್ಯವಾಗಿದೆಯೇ ಎನ್ನುವದನ್ನು ಪಂಚಾಯಿತಿ ನಿರ್ಧರಿಸಲು ಅವಕಾಶ ಕಲ್ಪಿಸಬೇಕು, ೯೪ ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಆ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾನೆಯೇ, ಮನೆತೆರಿಗೆ ಪಾವತಿಸಿದ್ದಾನೆಯೇ, ವಿದ್ಯುತ್ ಬಿಲ್ ಪಾವತಿಸಿದ್ದಾನೆಯೇ ಎಂಬ ಮುಂತಾದ ನಿಯಮಾವಳಿಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು. ಈಗಾಗಲೇ ೯೪ ಸಿಯಲ್ಲಿ ಹಕ್ಕು ಪಡೆದವರಲ್ಲಿ ಕೆಲವು ಬೋಗಸ್ ಆಗಿ ಕಾನೂನು ಬಾಹಿರವಾಗಿ ನೀಡಲಾಗಿದೆ ಎನ್ನುವ ದೂರು ಬಂದಿವೆ. ಹಾಗೂ ಇತ್ತೀಚೆಗೆ ನೀಡಿರುವ ಅರ್ಜಿಗಳಂತು ಬಹುತೇಕ ಬೋಗಸ್ ಇವೆ ಆದ್ದರಿಂದ ಅರ್ಹರಿಗೆ ಮಾತ್ರ ಹಕ್ಕುಪತ್ರ ದೊರೆಯುಂತಾಗಲು ಗ್ರಾ.ಪಂ ನಿರಪೇಕ್ಷಣ ಪತ್ರ ನೀಡಬೇಕು. ಕಾನೂನು ಬಾಹಿರ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಅಂತವರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಆದಿಯಾಗಿ ಎಲ್ಲಾ ಕಂದಾಯ ಅಧಿಕಾರಿಗಳಿಗೆ ಕ್ಲಾಸ್ ತಗೊಂಡ ಜಿಲ್ಲಾಧಿಕಾರಿಯವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು
ಜಡ್ಡು ಹಿಡಿದ ಅಧಿಕಾರಿಗಳ ಬೆವರಿಳಿಸಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹೋದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು
ಎಂದು ಮತ್ತೊಮ್ಮೆ ಬಿಸಿಮುಟ್ಟಿಸಿದರು. ಕೋವಿಡ್ ನಾಲ್ಕನೇ ಅಲೆ ವಕ್ಕರಿಸುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಪಡೆಯುವಲ್ಲಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಈ ವೇಳೆ ಪುತ್ತೂರು ಸಹಾಯಕ ಆಯುಕ್ತ ಗಿರಿನಂದನ್, ಕಡಬ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಭೂದಾಖಲೆಗಳು ಜಿಲ್ಲಾ ಉಪನಿರ್ದೆಶಕ ನಿರಂಜನ್ ಉಪಸ್ಥಿತರಿದ್ದರು. ಕಡಬ ತಹಸೀಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು. ಕಡಬ ಉಪತಹಸೀಲ್ದಾರ್‌ಗಳಾದ ನವ್ಯಾ, ಕೆ.ಟಿ.ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಮಗತ್ತ್ಮಲೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಭೂದಾಖಲೆಗಳ ಸಹಾಯಕ ನಿರ್ದೆಶಕಿ ರಮಾ ದೇವಿ, ಕಡಬ ತಾಲೂಕು ಪಂಚಾಯಿತಿ ಯೋಜನಾ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ. ಪಕೀರ ಮೂಲ್ಯ, ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಇದ್ದರು.
Kshetra Samachara
30/04/2022 12:43 pm