ಎಕ್ಕಾರು : ಕಟೀಲು ಸಮೀಪದ ಎಕ್ಕಾರು ಗುಡ್ಡೆ ಎಂಬಲ್ಲಿಂದ ಮುಚ್ಚೂರು ನೀರುಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ಮುಚ್ಚಿಸುವ ಕುರಿತು ನಿರ್ಣಯ ಕೈಗೊಂಡರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗಾಢ ನಿದ್ದೆಯಲ್ಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದೊಡ್ಡಮಟ್ಟದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಗೆ ಜನಪ್ರತಿನಿಧಿಗಳಿಂದ ಹಿಡಿದು ವಿವಿಧ ಇಲಾಖೆಗಳು ಯಾವ ರೀತಿ ಬೆಂಗಾವಲಾಗಿ ನಿಂತಿದೆ ಅಂತಂದ್ರೆ ನಿಜಕ್ಕೂ ಅಚ್ಚರಿ ಪಡಬೇಕು. ಯಾಕೆಂದ್ರೆ ಇಲ್ಲಿ ಪರ್ಮಿಟ್ ಕೂಡ ಇಲ್ಲ, ಸರ್ಕಾರಕ್ಕೂ ರಾಜಧನ ಪಾವತಿಸುತ್ತಿಲ್ಲ. ಐದೋ ಹತ್ತೋ ಸೆನ್ಸ್ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಲು ಪರ್ಮಿಟ್ ಪಡ್ಕೊಂಡು ಪಕ್ಕದ ಎಕರೆಗಟ್ಟಲೆ ಭೂಮಿಯನ್ನು ಅಗೆಯುತ್ತಾ ಇದ್ರೆ ಹೇಳೋರಿಲ್ಲ, ಕೇಳೋರಿಲ್ಲ. ಈ ಬಗ್ಗೆ ಸ್ಥಳೀಯರು ಗಣಿ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿದ್ರೆ "ಆಯ್ತು ಸರ್ವೇ ನಂಬರ್ ಹೇಳಿ, ನೋಡೋದಕ್ಕೆ ಹೇಳ್ತಿನಿ" ಅನ್ನೋ ರೆಡಿಮೇಡ್ ಉತ್ತರ ಬಿಟ್ರೆ ಕನಿಷ್ಠ ಸ್ಥಳಕ್ಕೆ ಬರೋ ಪುರುಸೊತ್ತು ಕೂಡಾ ಇವರಲ್ಲಿಲ್ಲ.
ಎಕ್ಕಾರಿನಲ್ಲಿ ನಡೆಯುತ್ತಿರುವ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ವಿರುದ್ಧ 29/09/2021ರಂದು ಪಂಚಾಯತ್ ನಲ್ಲಿ ನಿರ್ಣಯ ಕೈಗೊಂಡು ಮುಚ್ಚಿಸುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಇಲ್ಲಿಯವರೆಗೆ ಬಂದ್ ಆಗಿಲ್ಲ. ಸ್ಥಳೀಯ ಹಿರಿ ಕಿರಿಯ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ನಾಯಕರು ಜಾತಿ ಮತ ಬೇಧವಿಲ್ಲದೆ ಅಕ್ರಮ ವ್ಯವಹಾರದಲ್ಲಿ ಶಾಮೀಲಾಗಿದ್ದು ಅಕ್ರಮಕ್ಕೆ ಸೆಡ್ಡು ಹೊಡೆಯುವ ಗಟ್ಟಿ ಗುಂಡಿಗೆಯವರು ಯಾರು ಅನ್ನೋದೇ ಜನರ ಪ್ರಶ್ನೆಯಾಗಿದೆ.
Kshetra Samachara
15/04/2022 04:03 pm